ಸರ್ವೇ ಮೂಲಕ ಬಿಜೆಪಿ ಅಭ್ಯರ್ಥಿಗಳ ಆಯ್ಕೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜ. 26: ವಿಧಾನಸಭೆ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸರ್ವೆ ನಡೆಸಿ, ಇದರ ವರದಿ ಆಧಾರದ ಮೇಲೆ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ನಡೆಸಲಿದ್ದಾರೆ. ಬಿಜೆಪಿ ಪಕ್ಷ ಅಭ್ಯರ್ಥಿಗಳ ಮೇಲೆ ಅವಲಂಬಿತವಾಗಿರುವ ಪಕ್ಷವಲ್ಲ. ಕಾರ್ಯಕರ್ತರೇ ಪಕ್ಷದ ಬೆನ್ನೆಲುಬಾಗಿದ್ದಾರೆ' ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ತಾವು ಸ್ಪರ್ಧಾಕಾಂಕ್ಷಿಯಾಗಿದ್ದೆನೆ. ಪಕ್ಷದ ವರಿಷ್ಠರ ನಿರ್ಧಾರದಂತೆ ಮುನ್ನಡೆಯುತ್ತೆನೆ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಫೆ.4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಅಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಬಂದ್‍ಗೆ ಕರೆ ಕೊಟ್ಟರೆ ರಾಹುಲ್ ಗಾಂಧಿ ರಾಜ್ಯದ ಪ್ರವಾಸದ ಸಂದರ್ಭದಲ್ಲಿ ಬಿಜೆಪಿಯೇನು ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವುದಿಲ್ಲ ಎಂದ ಅವರು, ಕನ್ನಡ ಪರ ಸಂಘಟನೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಡೆಸಿದ ಬಂದ್ ಸಂಪೂರ್ಣ ವಿಫಲವಾಗಿದೆ ಎಂದರು.
ಜ. 23 ರಂದು ನಡೆಯಬೇಕಿದ್ದ ಕರ್ನಾಟಕ ಬಂದ್‍ನ್ನು ಜ.25 ರಂದು ಉದ್ದೇಶ ಪೂರ್ವಕವಾಗಿ ನಡೆಸಲಾಯಿತು. ಅಮಿತ್ ಶಾ ಅವರು ಭಾಗವಹಿಸಲಿದ್ದ ಪರಿವರ್ತನಾ ರ್ಯಾಲಿಯನ್ನು ವಿಫಲಗೊಳಿಸಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವಿಫಲವಾಗಿದೆ. ನಮಗೂ ರಾಜಕೀಯ ಮಾಡಲು ಬರುತ್ತದೆ. ಈಗಾಗಲೇ ಯಡಿಯೂರಪ್ಪರವರು ನಾವು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ.
ನಾಳೆ ಮಹದಾಯಿ ಕುರಿತು ಸರ್ವಪಕ್ಷ ಸಭೆ ಕರೆಯಲಾಗಿದ್ದು, ಇದರಲ್ಲಿ ನಾವು ಸ್ಪಷ್ಟವಾಗಿ ಈ ಹಿಂದೆಯೂ ಹೇಳಿದ್ದೇವೆ. ಈಗಲೂ ಹೇಳುತ್ತಿದ್ದೇವೆ. ಮಹದಾಯಿ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಬೆರೆಸುವುದು ಬೇಡ. ನಾವು ಗೋವ ಬಿಜೆಪಿ ಪಕ್ಷದ ಮುಖಂಡರನ್ನ ಒಪ್ಪಿಸುತ್ತೇವೆ. ಕಾಂಗ್ರೆಸ್ ಗೋವಾ ಕಾಂಗ್ರೆಸ್ ಪಕ್ಷವನ್ನ ಒಪ್ಪಿಸಲಿ ಎಂದು ಹೇಳಲಿದ್ದೇವೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಮೊದಲು ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ತನ್ನ ಸ್ಪಷ್ಟವಾದ ನಿಲುವು ತಿಳಿಸಲಿ ಎಂದು ಆಗ್ರಹಿಸಿದ ಈಶ್ವರಪ್ಪ, ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯು ರಾಜಕೀಯ ಉದ್ದೇಶದ ಸಭೆಯೇ ಹೊರತು ಮಹದಾಯಿ ಬಗೆಹರಿಸುವ ಯತ್ನವಲ್ಲ ಎಂದು ಟೀಕಿಸಿದರು.







