ನಕಲಿ ಅಂಕಪಟ್ಟಿ ತಯಾರಿಕೆ ಆರೋಪ: ಇಬ್ಬರ ಬಂಧನ
ಬೆಂಗಳೂರು, ಜ.26: ಹೆಸರಾಂತ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಶ್ರೀನಿವಾಸರೆಡ್ಡಿ (39), ಸುನಿಲ್ ಕುಮಾರ್ ಬಂಧಿತ ಆರೋಪಿಗಳೆಂದು ಸಿಸಿಬಿ ತಿಳಿಸಿದೆ.
ಮಹಾಲಕ್ಷಿಪುರಂನ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಸೊಸೈಟಿ ಎಂಬ ಕಾಲೇಜಿನ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲಿ ವರ್ಗಾವಣೆ ಪತ್ರ(ಟಿಸಿ), ಅಂಕಪಟ್ಟಿ, ಪದವಿ ಪತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ ದೇಶದ ಹೆಸರಾಂತ ವಿಶ್ವವಿದ್ಯಾಲಯಗಳ 1,500 ಕ್ಕೂ ಹೆಚ್ಚು ಅಂಕಪಟ್ಟಿಗಳು, ಅಂಕಪಟ್ಟಿ ತಯಾರು ಮಾಡಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ಗಳನ್ನು ವಶಕ್ಕೆ ಪಡೆದು ಇಲ್ಲಿನ ಮಹಾಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story