ಮಹಿಳೆಯರನ್ನು ಪ್ರೋತ್ಸಾಹಿಸುವುದರಿಂದ ಉತ್ತಮ ಸಮಾಜ ನಿರ್ಮಾಣ: ರೂಪಾ ಮುದಗಲ್
ಬೆಂಗಳೂರು, ಜ.27: ಸಮಾಜದಲ್ಲಿ ಸಾಧನೆ ಮಾಡುತ್ತಿರುವ ಹಾಗೂ ಮಾಡಿರುವ ಮಹಿಳೆಯರನ್ನು ಗುರುತಿಸಿ, ಸನ್ಮಾನ ಮಾಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಹೆಜ್ಜೆ ಇಡಬೇಕು ಎಂದು ಪೊಲೀಸ್ ಅಧಿಕಾರಿ ರೂಪಾ ಮುದಗಲ್ ಸಲಹೆ ನೀಡಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ದಿ ನಶೇಮನ್’ ವಾರಪತ್ರಿಕೆಯ 57 ನೆ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉತ್ತಮ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಿಸ್ವಾರ್ಥ ಸೇವೆ ಸಲ್ಲಿಸುವ ಅಥವಾ ಕೆಲಸ ಮಾಡುತ್ತಿರುವ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಹಿಂದಿನ ದಿನಗಳಲ್ಲಿ ಮಹಿಳೆ ಕೆಲಸಕ್ಕೆ ಹೋಗಬಾರದು. ಮನೆಯಲ್ಲಿ ಕೆಲಸ ಮಾಡಿಕೊಂಡಿರಬೇಕಿತ್ತು ಎಂಬ ಮನೋಭಾವವಿತ್ತು. ಆದರೆ, ಈಗ ಅದು ಬದಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಇಂತಹ ಪ್ರಶಸ್ತಿಗಳು ಮಹಿಳೆಯರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿವೆ ಎಂದು ನುಡಿದರು.
ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೆರ ಶೇಖ್ ಮಾತನಾಡಿ, ಮಹಿಳೆಯು ಯಾವುದರಲ್ಲಿಯೂ ಹಿಂದಿಲ್ಲ. ಆದರೆ, ಮಹಿಳೆಯರಲ್ಲಿ ನಾವು ಏನನ್ನು ಬೇಕಾದರೂ ಮಾಡಬಲ್ಲೆವು ಎಂಬ ವಿಶ್ವಾಸವಿರಬೇಕು. ಸಮಾಜದಲ್ಲಿ ಒಳ್ಳೆ ಕೆಲಸ ಮಾಡಿದರೆ ನಮ್ಮನ್ನು ಗುರುತಿಸುತ್ತಾರೆ ಎಂದು ತಿಳಿಸಿದರು.
ನಾನು ಸಮಾಜದಲ್ಲಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳ ವಿರುದ್ಧ ಪ್ರಶ್ನೆ ಮಾಡಿದೆ. ಹೀಗಾಗಿ, ಇಂದು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರ ಗುಂಪನ್ನು ಕಟ್ಟಲು ಸಾಧ್ಯವಾಗಿದೆ. ಅದೇ ರೀತಿಯಲ್ಲಿ ಮಹಿಳೆ ಏನೂ ಮಾಡಲಾಗದವಳಲ್ಲ, ಎಲ್ಲವನ್ನೂ ಮಾಡಬಲ್ಲಳು ಎಂಬುದನ್ನು ಸಾಬೀತು ಮಾಡಬೇಕು ಎಂದು ಹೇಳಿದರು.
ಮುಂದಿನ ಪೀಳಿಗೆಯ ಮಕ್ಕಳಲ್ಲಿ ಭಯ ಪಡುವ ಸಂಸ್ಕೃತಿಯನ್ನು ದೂರ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಭಯದ ವಾತಾವರಣದಿಂದ ದೂರವಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜೀವಿಸುವುದು ಕಷ್ಟವಾಗುತ್ತದೆ ಎಂದ ಅವರು, ಎಲ್ಲರೂ ಸ್ವತಂತ್ರವಾಗಿ ಜೀವಿಸಲು ಅವಕಾಶ ಕಲ್ಪಿಸಬೇಕು. ಎಲ್ಲರಿಗೂ ಓದುವ, ಕಲಿಯುವ ಹಕ್ಕುಗಳಿವೆ. ಅದನ್ನು ದಮನ ಮಾಡುವ ಪ್ರಯತ್ನ ಮಾಡಬಾರದು ಎಂದು ಅವರು ನುಡಿದರು.
ಇದೇ ವೇಳೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಗೀತಾ ಮೆಮನ್, ಎಎಪಿ ಮುಖಂಡರಾದ ಶಾಂತಲಾ ದಾಮ್ಲೆ, ನಜ್ಮಾ ರ್ಹೋಜಲಿ, ಡಾ.ಆರತಿಕೃಷ್ಣ, ಪತ್ರಕರ್ತರಾದ ಅಫ್ಶಾನ್ ಯಾಸ್ಮಿನ್, ನಬೀಲಾ ಜಮಾಲುದ್ದೀನ್, ರೋಹಿಣಿ ಸ್ವಾಮಿ, ಫರೀದಾ ರಹಮತುಲ್ಲಾ, ಜಾಹ್ನವಿ ಮಹದಿ, ಮುನೀರ್ ಅಹಮದ್ ಅಜಾದ್, ಜಹೀರ್ ಅನ್ಸಾರ್, ಎಂ.ಜೆ.ಅಸದ್ ಅಬ್ಬಾಸ್‌ಗೆ ನಶೇಮನ್ ಹೀರಾ ಪ್ರಶಸ್ತಿ ನೀಡಲಾಯಿತು.
ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಾಜಿಯಾ ಖಾನ್, ಡಾ.ರಾಜಲಕ್ಷ್ಮಿ, ಅರಸಿ ಶರ್ಮಾ, ಸಮೀರಾ ಫರ್ನಾಂಡಿಸ್, ಡಾ.ಸೈಯದ್ ನಸ್ರತ್, ನೀತು ಸೈನಿ, ಸ್ನೇಹ ನಾಗಪಾಲ್, ನಾಜ್ನೀನ್, ಶಿಲ್ಪಿ ಚೌದರಿ, ಡಾ.ಶಮಾ, ಬಿ.ಟಿ.ಲಲಿತಾ ನಾಯಕ್ ಮತ್ತು ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್, ಕಾಂಗ್ರೆಸ್ ವಕ್ತಾರ ಡಾ.ನಾಗಲಕ್ಷ್ಮಿ ಚೌಧರಿ, ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಸೇರಿದಂತೆ ಇನ್ನಿತರರಿಗೆ ನಶೇಮನ್ ಹೀರಾ ಪ್ರಶಸ್ತಿ ಪ್ರದಾನ ಮಾಡಲಾಯಿತು.







