ನಮ್ಮ ಪ್ರಜಾಪ್ರಭುತ್ವ ಪರಿಕಲ್ಪನೆ ಶ್ರೇಷ್ಠ ಪರಿಕಲ್ಪನೆಯಾಗಿದೆ : ಬಿ.ಎಲ್.ಜಿನರಾಳ್ಕರ್

ತುಮಕೂರು,ಜ.27: ಮತದಾರರ ದಿನಾಚರಣೆಯನ್ನು ನಾವು ನಮ್ಮ ರಾಷ್ಟ್ರದ ಸಂವಿಧಾನವನ್ನು ಅಂಗೀಕರಿಸಿದ ಹಾಗೂ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನಾಗಿ ಆಚರಿಸುತ್ತಿದ್ದು, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ಅತ್ಯಂತ ಶ್ರೇಷ್ಟವಾದುದು ಹಾಗೂ ವಿಶ್ವಕ್ಕೆ ಮಾದರಿಯಾದದ್ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಎಲ್. ಜಿನರಾಳ್ಕರ್ ಅವರು ತಿಳಿಸಿದ್ದಾರೆ.
ಅವರು ಭಾರತ ಚುನಾವಣಾ ಆಯೋಗ, ಕರ್ನಾಟಕ ಸರ್ಕಾರ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಆಯೋಜಿಸಿದ್ದ 8ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವದ 193 ರಾಷ್ಟ್ರಗಳಲ್ಲಿ ಅವರದೇ ಆದಂತಹ ಅರಸೊತ್ತಿಗೆ, ಕಮ್ಯುನಿಷ್ಟ, ಮಿಲಿಟರಿ ಮುಂತಾದ ಆಡಳಿತ ವ್ಯವಸ್ಥೆಗಳನ್ನು ಹೊಂದಿದ್ದು ನಮ್ಮ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿಕಲ್ಪನೆಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಜಾತಿ-ಭೇಧ, ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ ಎನ್ನುವ ಭೇದಗಳಿಲ್ಲದೆ ಸರ್ವರಿಗೂ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕನ್ನು ನೀಡುವ ಮೂಲಕ ನಮ್ಮ ಸಂವಿಧಾನ ವಿಶ್ವದಲ್ಲೇ ಸರ್ವಶ್ರೇಷ್ಠವಾದ ಸಂವಿಧಾನವಾಗಿದೆ.
ಸಂವಿಧಾನಬದ್ಧವಾಗಿ ಬಂದಿರುವ ನಮ್ಮ ಮತದಾನದ ಹಕ್ಕನ್ನು ಪವಿತ್ರ ಕಾರ್ಯವೆಂದು ಪರಿಗಣಿಸಿ ಪ್ರತಿಯೊಬ್ಬರೂ ವಿವೇಚನೆಯಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಮತಗಳನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಘನತೆ ಗೌರವಗಳನ್ನು ಹೆಚ್ಚಿಸಬೇಕೆಂದು ಹಾಗೂ 18 ವರ್ಷ ತುಂಬಿದ ಎಲ್ಲರೂ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ತುಮಕೂರು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಮಾತನಾಡಿ, ನಮ್ಮ ದೇಶವನ್ನಾಳಿದ ಯಾವ ರಾಜಸಂತತಿಯೂ ಜನರಿಗೆ ತಮಗೊಪ್ಪುವ ನಾಯಕನನ್ನು/ ಆಡಳಿತಗಾರನನ್ನು ಆಯ್ಕೆ ಮಾಡುವ ಅಥವಾ ಚುನಾಯಿಸುವ ಅವಕಾಶದಿಂದ ವಂಚಿತರನ್ನಾಗಿಸಿದ್ದರು ಎಂದರು
ನಮ್ಮ ದೇಶವನ್ನು ದಾಸ್ಯಮುಕ್ತ ಮಾಡುವ ಏಕೈಕ ಉದ್ದೇಶಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರರ 2 ಅಂಶಗಳ ಕಾರ್ಯಕ್ರಮವೆಂದರೆ ತಮಗೊಪ್ಪುವ ಪ್ರತಿನಿಧಿಯನ್ನು ಆಡಳಿತ ನಡೆಸಲು ಆಯ್ಕೆ ಮಾಡುವುದು ಹಾಗೂ ಪ್ರತಿಯೊಬ್ಬರಿಗೂ ಆಯ್ಕೆ ಮಾಡುವ ಹಕ್ಕನ್ನು ನೀಡಬೇಕೆಂಬುದೇ ಆಗಿತ್ತು ಎಂದ ಜಿಲ್ಲಾಧಿಕಾರಿಗಳು, 1909ರ ಮಿಂಟೋಮಾರ್ಲೆ ಸುಧಾರಣೆಗಳು, 1919ರ ಮಿಂಟೊಚಾಮ್ರ್ಸ್ ಆಡಳಿತ ಸುಧಾರಣೆಗಳು ಹಾಗೂ 1935ರ ಸರ್ಕಾರಿ ಆದೇಶಗಳನ್ವಯ ಬ್ರಿಟೀಷರು ನಮಗೆ ಅದರಲ್ಲಿಯೂ ಕಂದಾಯ ಕಟ್ಟುವ ಹಾಗೂ ಪದವೀಧರರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಿದ್ದು, ಇತರೆಯವರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕಿನಿಂದ ವಂಚಿತರಾಗಿದ್ದರು. ಆದರೆ 1950ರ ಗಣರಾಜ್ಯ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ಅಂಗೀಕರಿಸಿದ ದಿನದಿಂದ ನಮ್ಮ ದೇಶದ ಎಲ್ಲಾ ನಾಗರೀಕರಿಗೂ ಮತದಾನದ ಹಕ್ಕನ್ನು ನೀಡಲಾಯಿತು ಎಂದು ತಿಳಿಸಿದರು.
ಮತ ಚಲಾಯಿಸುವುದು ನಮ್ಮ ಹಕ್ಕಾಗಿದ್ದು, ನಾವು ಮತವನ್ನು ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಆಸೆ ಆಮಿಷಗಳಿಗೆ ಒಳಗಾಗದೆ, ನಿರ್ಭಯವಾಗಿ ಮತಗಳನ್ನು ನಮಗೆ ಮನಸ್ಸಿಗೊಪ್ಪಿದ ಪ್ರತಿನಿಧಿಗೆ ಚಲಾಯಿಸಬೇಕೆಂದರು. ಅಂದು ನಮ್ಮ ಹಿರಿಯರು ಮತದಾನದ ಹಕ್ಕಿಗಾಗಿ ಹೋರಾಟ ಮಾಡಿದರೆ ಇಂದು ನಾವು ಮತಚಲಾಯಿಸುವಂತೆ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ ಎಂದರು.
ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಅವರು ಮತದಾನದ ಪ್ರಮಾಣ ವಚನ ಭೋದಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಅನಿತಾ ಅವರು ಮಾತನಾಡಿದರು. ಎಂಪ್ರೆಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಮತದಾನದ ಕುರಿತು ಭಾಷಣ ಮಾಡಿದರು. ಉಪ ವಿಭಾಗಾಧಿಕಾರಿ ತಬ್ಸುಮ್ ಜಹೇರಾ ಸರ್ವರನ್ನೂ ಸ್ವಾಗತಿಸಿದರು. ಸಮಾರಂಭದಲ್ಲಿ ತಹಶೀಲ್ದಾರ್ ರಂಗೇಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾಗಣ್ಣ, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣಪ್ಪ, ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಾದ ಕೆ.ಕೃಷ್ಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.
ಮಾನವ ಸರಪಳಿ: ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಟೌನ್ ಹಾಲ್ ವೃತ್ತದಲ್ಲಿ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು. ನಂತರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಅನ್ನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಅನಿತಾ, ಉಪ ವಿಭಾಗಾಧಿಕಾರಿ ತಬ್ಸುಮ್ ಜಹೇರಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡಿ., ತಹಶೀಲ್ದಾರ್ ರಂಗೇಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾಗಣ್ಣ, ಜಿ.ಪಂ. ಉಪಕಾರ್ಯದರ್ಶಿ ಕೃಷ್ಣಪ್ಪ, ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಾದ ಕೆ.ಕೃಷ್ಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಮಂಜುನಾಥ್ ಅವರುಗಳು ಮಾನವ ಸರಪಳಿ ಹಾಗೂ ಜಾಥಾದಲ್ಲಿ ಭಾಗವಹಿಸಿದ್ದರು.







