ಪ್ರತಿಷ್ಠೆಗಿಂತ ರಾಜ್ಯದ ರೈತರ ಹಿತ ಮುಖ್ಯ : ಮುಖ್ಯಮಂತ್ರಿ
ಮಹಾದಾಯಿ ನದಿ ನೀರು ವಿವಾದ

ಬೆಂಗಳೂರು, ಜ.27: ಮಹಾದಾಯಿ ನದಿ ನೀರಿನ ವಿವಾದ ಬಗೆಹರಿಸುವ ವಿಚಾರದಲ್ಲಿ ಪ್ರತಿಷ್ಠೆ ಬದಿಗೊತ್ತಿ ಗೋವಾ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲು ನಾನು ಈಗಲೂ ಸಿದ್ಧವಾಗಿದ್ದೇನೆ. ನಮಗೆ ಪ್ರತಿಷ್ಠೆಗಿಂತ ರಾಜ್ಯದ ರೈತರ ಹಿತ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹಾದಾಯಿ ವಿವಾದ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ನಾಯಕರು ಹಾಗೂ ರೈತ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನನ್ನ ಪತ್ರಕ್ಕೆ ಮೊದಲು ಗೋವಾ ಮುಖ್ಯಮಂತ್ರಿ ಉತ್ತರ ಕೊಡಲಿ. ಅವರು ಸಭೆ ಕರೆದು ಮಾತುಕತೆಗೆ ಸಿದ್ಧ ಎಂದು ಹೇಳಿದರೆ, ಗೋವಾ ಕಾಂಗ್ರೆಸ್ಸಿಗರ ಜೊತೆ ನಾನು ಮಾತನಾಡುತ್ತೇನೆ ಎಂದ ಅವರು, ಮಹಾದಾಯಿ ವಿಚಾರದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಬಳಿಗೆ ನಿಯೋಗದಲ್ಲಿ ಹೋಗಿ, ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ, ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ ಮಾಡೋಣ ಎಂದರೆ ಬಿಜೆಪಿಯವರು ಒಪ್ಪಲು ತಯಾರಿಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಾದಾಯಿ ವಿಚಾರದ ಬಗ್ಗೆ ಚರ್ಚಿಸಲು ಸರ್ವಪಕ್ಷ ಮುಖಂಡರು ಹಾಗೂ ರೈತ ಮುಖಂಡರೊಂದಿಗೆ ಬರುತ್ತೇವೆ. ಸಮಯ ಕೊಡಿ ಎಂದು ಪ್ರಧಾನಿಗೆ ಪತ್ರ ಬರೆಯುತ್ತೇನೆ. ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ನಾಯಕರೂ ಬರಲಿ. ಎಲ್ಲ ಪಕ್ಷಗಳ ಸಂಸದರೂ ಭಾಗವಹಿಸಲಿ. ವಿವಾದ ಬಗೆಹರಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ಅವರು ಹೇಳಿದರು.
ಮಹಾದಾಯಿ ಹೋರಾಟಗಾರರ ಮನವಿ ಮೇರೆಗೆ ಇಂದು ಸಭೆ ಕರೆಯಲಾಗಿತ್ತು. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮಧ್ಯೆ ಪ್ರವೇಶ ಮಾಡಬೇಕು. ಇದಕ್ಕಾಗಿ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಬೇಕು ಎಂಬ ಸಲಹೆ ಕೇಳಿ ಬಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾಧ್ಯವಾದರೆ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ನ್ಯಾಯ ಮಂಡಳಿ ಸಲಹೆ ನೀಡಿದೆ. ಅದರಂತೆ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದು ಮಾತುಕತೆಗೆ ಬರುವಂತೆ ಆಹ್ವಾನ ನೀಡಿದೆ. ಗೋವಾದ ಅಂದಿನ ಮುಖ್ಯಮಂತ್ರಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಭೆಯನ್ನು ನಾನು ಕರೆಯುತ್ತೇನೆ ಬನ್ನಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ರ ಬರೆದಾಗ ಪೂರ್ವಭಾವಿಯಾಗಿ ನಾವು ಸರ್ವಪಕ್ಷ ನಾಯಕರ ಸಭೆ ಕರೆದು ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ತೀರ್ಮಾನ ಕೈಗೊಂಡೆವು ಎಂದು ಅವು ಹೇಳಿದರು.
ಗೋವಾದ ಕಾಂಗ್ರೆಸ್ಸಿಗರ ಜೊತೆಗೆ ನೀವು ಮಾತನಾಡಿ ಎಂದು ಬಿಜೆಪಿಯವರು ಪದೇ ಪದೇ ಹೇಳುತ್ತಾರೆ. ಗೋವಾದವರು ಮಾತುಕತೆಗೆ ಮುಂದಾದರೆ ಮಾತನಾಡಲು ಸಿದ್ಧ ಎಂದು ಹಿಂದೆಯೇ ಹೇಳಿದ್ದೇನೆ. ಆದರೆ ಒಟ್ಟು 16 ಪತ್ರ ವ್ಯವಹಾರ ನಡೆದರೂ ಗೋವಾ ಮುಖ್ಯಮಂತ್ರಿ ಪ್ರತಿಕ್ರಿಯಿಸಲಿಲ್ಲ. ವಿಧಾನಸಭೆ ಚುನಾವಣೆ ನಡೆಯಲಿ, ಬಳಿಕ ಮಾತನಾಡುವ ಎಂದರು. ಚುನಾವಣೆ ಬಳಿಕ ಮುಖ್ಯಮಂತ್ರಿಯಾದ ಮನೋಹರ್ ಪಾರಿಕ್ಕರ್‌ಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಹಾದಾಯಿ ಹೋರಾಟಗಾರರು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿವಾಸದ ಬಳಿ ಧರಣಿ ನಡೆಸಿದಾಗ ಅಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಡಿ.15ರೊಳಗೆ ವಿವಾದ ಬಗೆಹರಿಸಿ ನೀರು ಹರಿಸುವುದಾಗಿ ಮಾತು ಕೊಟ್ಟಿದ್ದರು. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಪಕ್ಷದ ನಾಯಕರ ಸಭೆ ಕರೆದು ಚಚಿಸಿರ್ದರು ಎಂದು ಅವರು ಹೇಳಿದರು.
ಇದಾದ ಬಳಿಕ ಮನೋಹರ್ ಪಾರಿಕ್ಕರ್, ಯಡಿಯೂರಪ್ಪಗೆ ಪತ್ರ ಬರೆದರು. ಆ ಪತ್ರವನ್ನು ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಓದಲಾಯಿತು. ಗೋವಾ ಕಾಂಗ್ರೆಸ್ಸಿಗರ ಜೊತೆ ಮಾತನಾಡಿ ಎಂದು ಆ ಪತ್ರದಲ್ಲಿ ಹೇಳಿರಲಿಲ್ಲ. ಪಾರಿಕ್ಕರ್ ನನಗೆ ಪತ್ರ ಬರೆಯದಿದ್ದರೂ ಪ್ರತಿಷ್ಠೆ ಬದಿಗೊತ್ತಿ ನಾನು ಅವರಿಗೆ ಪತ್ರ ಬರೆದೆ. ನಮ್ಮ ಮುಖ್ಯ ಕಾರ್ಯದರ್ಶಿ ಬರೆದ ಪತ್ರಕ್ಕೂ ಉತ್ತರ ಬರಲಿಲ್ಲ. ಆದರೆ, ಗೋವಾದ ಜಲ ಸಂಪನ್ಮೂಲ ಸಚಿವರು ಬಾಯಿಗೆ ಬಂದಂತೆ ಮಾತನಾಡಿ, ಪಾರಿಕ್ಕರ್, ಯಡಿಯೂರಪ್ಪಗೆ ಬರೆದ ಪತ್ರ ರಾಜಕೀಯ ಸ್ಪಂಟ್ ಎಂದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗೋವಾ ಮುಖ್ಯಮಂತ್ರಿ ನಾಳೆಯೆ ಸಭೆ ಕರೆದರೂ ಹೋಗಲು ನಾನು ತಯಾರಿದ್ದೇನೆ. ಮೊದಲು ಅವರು ನಾನು ಬರೆದಿರುವ ಪತ್ರಕ್ಕೆ ಉತ್ತರ ಕೊಡಲಿ. ಅವರು ಮಾತುಕತೆಗೆ ಮುಂದಾದರೆ ಗೋವಾದ ಕಾಂಗ್ರೆಸ್ ನಾಯಕರ ಜೊತೆ ನಾನು ಮಾತನಾಡುತ್ತೇನೆ. ಸಾಮಾನ್ಯವಾಗಿ ಅಂತಾರಾಜ್ಯ ಜಲ ವಿವಾದಗಳಲ್ಲಿ ಈ ರೀತಿ ಎಂದೂ ನಡೆದಿಲ್ಲ. ಆದರೂ ಗೋವಾ ಮುಖ್ಯಮಂತ್ರಿ ಸಭೆ ನಿಗಧಿ ಮಾಡಿದರೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ನಮ್ಮನ್ನು ಟೀಕಿಸುವುದೇ ಬಿಜೆಪಿಗೆ ಮುಖ್ಯ
ಗೋವಾ ಮುಖ್ಯಮಂತ್ರಿ ಸಭೆ ಕರೆಯದಿದ್ದರೆ ಪ್ರಧಾನಿ ಬಳಿಗೆ ಹೋಗಿ, ಮಧ್ಯಸ್ಥಿಕೆ ವಹಿಸಲು ಮನವಿ ಮಾಡೋಣ ಎಂದರೆ, ಅದಕ್ಕೆ ಒಪ್ಪದ ಬಿಜೆಪಿ ನಾಯಕರು, ಸಭೆಯಿಂದ ಹೊರಗೆ ಹೋಗಿದ್ದಾರೆ. ವಿವಾದ ಬಗೆಹರಿಸುವುದಕ್ಕಿಂತ ಅವರಿಗೆ ನಮ್ಮನ್ನು ಟೀಕಿಸುವುದೆ ಮುಖ್ಯವಾಗಿದೆ. ಪರಿವರ್ತನಾ ರ್ಯಾಲಿಯಲ್ಲಿ ಅಮಿತ್ ಶಾ ಎಲ್ಲಿಯೂ ಮಹಾದಾಯಿ ವಿಚಾರದ ಬಗ್ಗೆ ಮಾತನಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಮಾತನಾಡಿ ಎನ್ನುತ್ತಾರೆ. ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯೇ? ಅವರು ಪ್ರಧಾನಿಯಾದಾಗ ಮಾತನಾಡುತ್ತೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ







