ಲಾಲೂ ವಿರುದ್ಧ ನಡೆದಿರುವ ಪಿತೂರಿಯನ್ನು ಜನರ ಮುಂದಿಡಲು ‘ನ್ಯಾಯಯಾತ್ರೆ’ : ತೇಜಸ್ವಿ ಯಾದವ್

ಪಾಟ್ನ, ಜ.27: ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್‌ರನ್ನು ದೋಷಿಯೆಂದು ಬಿಂಬಿಸಲು ನಡೆಸಿರುವ ಪಿತೂರಿಯನ್ನು ಜನತೆಗೆ ತಿಳಿಯಪಡಿಸುವ ಉದ್ದೇಶದಿಂದ ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ಫೆ.9ರಿಂದ ‘ನ್ಯಾಯಯಾತ್ರೆ’ ನಡೆಸಲಾಗುವುದು ಎಂದು ಲಾಲೂಪ್ರಸಾದ್ ಯಾದವ್ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಲಾಲೂಪ್ರಸಾದ್ ಅವರ ವಿರೋಧಿಗಳಾದ ಬಿಜೆಪಿ ಹಾಗೂ ನಿತೀಶ್ ಕುಮಾರ್ ನಡೆಸಿರುವ ಪಿತೂರಿಯನ್ನು ಹಾಗೂ ಜನತೆ ನೀಡಿರುವ ತೀರ್ಪಿಗೆ ನಿತೀಶ್ ಕುಮಾರ್ ಮಾಡಿರುವ ಅವಮಾನವನ್ನು (ಬಿಜೆಪಿ ಜತೆ ಕೈಜೋಡಿಸುವ ಮೂಲಕ) ಜನತೆಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಫೆ.9ರಂದು ಪೂರ್ನಿಯಾ ಜಿಲ್ಲೆಯಿಂದ ‘ನ್ಯಾಯಯಾತ್ರೆ’ ಆರಂಭಗೊಳ್ಳಲಿದೆ. ಮಹಾಮೈತ್ರಿಯನ್ನು ಧಿಕ್ಕರಿಸಿ ಬಿಜೆಪಿ ಬೆಂಬಲದಿಂದ ನಿತೀಶ್ ಹೊಸ ಸರಕಾರ ರಚಿಸಿದ ಬಳಿಕ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಾವಿರಾರು ಬಡವರಿಗೆ ಉದ್ಯೋಗವಿಲ್ಲದ ಪರಿಸ್ಥಿತಿ ಬಂದಿದೆ. ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ತೇಜಸ್ವಿ ಆರೋಪಿಸಿದರು.
ನಿತೀಶ್ ಕುಮಾರ್ ಆಡಳಿತಾವಧಿಯಲ್ಲಿ ನಡೆದಿರುವ ಸೃಜನ್ ಹಗರಣ, ಶೌಚಾಲಯ ಹಗರಣ, ‘ಟಾಪರ್ಸ್’ ಹಗರಣ ಮುಂತಾದವುಗಳನ್ನು ಜನತೆಗೆ ತಿಳಿಸುವ ಉದ್ದೇಶವಿದೆ. ಜನರ ಜೊತೆ ಸಂವಾದ ನಡೆಸಿ ಅವರ ಸಮಸ್ಯೆಯನ್ನು ಆಲಿಸುತ್ತೇನೆ. ಈ ವಿಷಯಗಳನ್ನು ಫೆ.27ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾವಿಸುತ್ತೇನೆ ಎಂದರು.
ಕಳೆದ ವರ್ಷ ತಾನು ಕೈಗೊಂಡಿದ್ದ ‘ಜನಾದೇಶ ಅಪಮಾನ ಯಾತ್ರೆ’ಗೆ ಜನತೆಯ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಬಿಜೆಪಿಯ ಜೊತೆ ಕೈಜೋಡಿಸಿರುವ ವಿಷಯದಲ್ಲಿ ಜನತೆಗೆ ನಿತೀಶ್ ಕುಮಾರ್ ಬಗ್ಗೆ ಭಾರೀ ಆಕ್ರೋಶವಿದೆ ಎಂದು ತೇಜಸ್ವಿ ಯಾದವ್ ಹೇಳಿದರು.