ಕೈಗಾರಿಕೆಗಳ ಅನುಕೂಲಕ್ಕೆ ಪರಿಸರ ಕಾನೂನುಗಳನ್ನು ತಿರುಚುತ್ತಿರುವ ಕೇಂದ್ರ ಸರಕಾರ
ಜೈರಾಮ್ ರಮೇಶ್ ಆರೋಪ

ಕೋಲ್ಕತಾ,ಜ.27: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಕೈಗಾರಿಕೆಗಳ ಅನುಕೂಲಕ್ಕಾಗಿ ದೇಶದ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ತಿರುಚುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಆರೋಪಿಸಿದರು.
ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯುಪಿಎ -2 ಸರಕಾರದಲ್ಲಿ 2009-2011ರ ಅವಧಿಯಲ್ಲಿ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರೂ ಆಗಿದ್ದ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ತನ್ನ ಬೋಧನೆಯನ್ನು ಖುದ್ದಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಪರಿಸರ ಕಾನೂನುಗಳನ್ನು ಪ್ರತಿ ದಿನವೂ ದುರ್ಬಲಗೊಳಿಸಲಾಗುತ್ತಿದೆ. ಪರಿಸರ ಸಚಿವಾಲಯವು ರಬ್ಬರ್ ಸ್ಟಾಂಪ್‌ನಂತಾಗಿದೆ. ಉದ್ಯಮ ನಿರ್ವಹಣೆಯನ್ನು ಸುಲಭ ಗೊಳಿಸುವ ಹೆಸರಿನಲ್ಲಿ ಕೈಗಾರಿಕೆಗಳ ಅನುಕೂಲಕ್ಕಾಗಿ ಪರಿಸರ ಕಾನೂನುಗಳನ್ನು ತಿರುಚಲಾಗುತ್ತಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾರ್ಯಗಳನ್ನು ಹೊಗಳಿದ ಅವರು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದ ಪ್ರಧಾನಿಯಾಗಿದ್ದರು ಮತ್ತು ಅದನ್ನು ದೈನಂದಿನ ಆಡಳಿತದಲ್ಲಿ ಸೇರಿಸಿಕೊಂಡಿದ್ದರು. ಅವರು 1972ರಷ್ಟು ಹಿಂದೆಯೇ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಕುರಿತು ಮಾತನಾಡಿದ್ದರು. ಈಗಿನ ಪ್ರಧಾನಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.