ಪೊಲೀಸ್ ಗೋಲಿಬಾರ್ ವಿರುದ್ಧ ಭಾರೀ ಪ್ರತಿಭಟನೆ
ಅಸ್ಸಾಂನಲ್ಲಿ ಸಾವಿರಕ್ಕೂ ಅಧಿಕ ರೈಲ್ವೆ ಪ್ರಯಾಣಿಕರು ಅತಂತ್ರ

ಗುವಾಹಟಿ,ಜ.27: ದಿಮಾ ಹಸಾವೊ ಜಿಲ್ಲೆಯಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯು ಶನಿವಾರವೂ ಮುಂದುವರಿದಿದ್ದು, ನ್ಯೂ ಹಾಫ್ಲಾಂಗ್ ರೈಲ್ವೆ ನಿಲ್ದಾಣದಲ್ಲಿ ಕನಿಷ್ಠ 1,100 ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಮಾಯಬಂಗ್ ಮತ್ತು ಸುತ್ತಲಿನ ಕೆಲವು ಪ್ರದೇಶಗಳಲ್ಲಿ ಶನಿವಾರವೂ ಕರ್ಫ್ಯೂ ಮುಂದುವರಿದಿದೆ.
ಅತಂತ್ರರಾಗಿರುವ ಪ್ರಯಾಣಿಕರನ್ನು ರಸ್ತೆ ಮೂಲಕ ರವಾನಿಸಲು 25 ಬಸ್‌ಗಳಿಗೆ ನಾವು ಕೋರಿಕೆ ಸಲ್ಲಿಸಿದ್ದೆವು. ಆದರೆ ಪ್ರತಿಭಟನಾಕಾರರು ಈ ಬಸ್‌ಗಳು ನ್ಯೂ ಹಾಫ್ಲಾಂಗ್‌ಗೆ ತೆರಳಲು ಅವಕಾಶ ನೀಡಿಲ್ಲ. ಅವರು ಹಲವೆಡೆಗಳಲ್ಲಿ ರೈಲ್ವೆ ಹಳಿಗಳಿಗೆ ಹಾನಿಯನ್ನುಂಟು ಮಾಡಿ ಫಿಷ್‌ಪ್ಲೇಟ್‌ಗಳನ್ನು ತೆಗೆದು ಹಾಕಿದ್ದಾರೆ. ದುರಸ್ತಿಗೆ ಮತ್ತು ರೈಲು ಸಂಚಾರ ಪುನರಾರಂಭಕ್ಕೆ ಕಾಲಾವಕಾಶ ಅಗತ್ಯವಿದೆ ಎಂದು ದಿಮಾ ಹಸಾವೊ ಜಿಲ್ಲಾಧಿಕಾರಿ ದೇವಜ್ಯೋತಿ ಹಝಾರಿಕಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ ಬೆಳಗ್ಗೆ ಪೊಲೀಸ್ ಗೋಲಿಬಾರ್ ನಡೆದಾಗಿನಿಂದ 48 ಗಂಟೆಗಳ ಬಂದ್‌ಗೂ ಪ್ರತಿಭಟನಾನಿರತ ಸಂಘಟನೆಗಳು ಕರೆ ನೀಡಿವೆ. ಪ್ರತಿಭಟನಾಕಾರರು ಶುಕ್ರವಾರ ನ್ಯೂ ಹಾಫ್ಲಾಂಗ್ ನಿಲ್ದಾಣದಲ್ಲಿ ಸಿಲ್ಚಾರ್-ಗುವಾಹಟಿ ಫಾಸ್ಟ್ ಪ್ಯಾಸೆಂಜರ್ ರೈಲನ್ನು ತಡೆದು ನಿಲ್ಲಿಸಿದ್ದು, ಆಗಿನಿಂದಲೂ ಪ್ರಯಾಣಿಕರು ನಿಲ್ದಾಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ.
ಜಿಲ್ಲಾಡಳಿತವು ಅತಂತ್ರ ಪ್ರಯಾಣಿಕರಿಗೆ ಆಹಾರ, ಕುಡಿಯುವ ನೀರು, ಔಷಧಿ ಇತ್ಯಾದಿಗಳನ್ನು ವ್ಯವಸ್ಥೆ ಮಾಡಿದೆ. ಅವರ ಸುರಕ್ಷತೆಗಾಗಿ ಬಿಗಿಭದ್ರತೆಯನ್ನು ಏರ್ಪಡಿ ಸಲಾಗಿದೆ.
ಎನ್‌ಎಸ್‌ಸಿಎನ್-ಐಎಂ ಮತ್ತು ಕೇಂದ್ರ ಸರಕಾರದ ನಡುವೆ ಮಾತುಕತೆಯ ಅಂಗವಾಗಿ ಜಿಲ್ಲೆಯಲ್ಲಿ ನಾಗಾಗಳಿಗಾಗಿ ಸ್ಯಾಟೆಲೈಟ್ ಕೌನ್ಸಿಲ್‌ಗಳ ಸ್ಥಾಪನೆಗೆ ಕೇಂದ್ರವು ಒಪ್ಪಿಕೊಂಡಿದೆಯೆಂಬ ವದಂತಿಗಳ ಹಿನ್ನೆಲೆಯಲ್ಲಿ ಹಲವಾರು ಸಾಮಾಜಿಕ ಸಂಘಟನೆಗಳು ಕಳೆದೊಂದು ವಾರದಿಂದಲೂ ಪ್ರತಿಭಟನೆಯಲ್ಲಿ ತೊಡಗಿವೆ. ಗುರುವಾರ ಮಾಯಬಂಗ್‌ನಲ್ಲಿ ಪ್ರತಿಭಟನಾ ರ್ಯಾಲಿಯು ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಂಭತ್ತು ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಶುಕ್ರವಾರ ಮೃತಪಟ್ಟಿರುವುದು ಪ್ರತಿಭಟನೆಗಳನ್ನು ಇನ್ನಷ್ಟು ತೀವ್ರಗೊಳಿಸಿದೆ.