ಕೆಳಾರ್ಕಳಬೆಟ್ಟು ಸರಕಾರಿ ಶಾಲೆಗೆ ‘ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ’ ಪ್ರದಾನ

ಉಡುಪಿ, ಜ.27: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ಗಳ ಸಂಯುಕ್ತ ಆಶ್ರಯದಲ್ಲಿ ‘ಜಿಲ್ಲಾ ಪರಿಸರ ಮಿತ್ರ ಶಾಲೆ’ ಪ್ರಶಸ್ತಿಯನ್ನು ಕೆಳಾರ್ಕಳಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಗೆ ಮಣಿಪಾಲ ರಜತಾದ್ರಿಯ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ವೆಂಕಟೇಶ್ ನಾಯ್ಕಾ ಕೆಳಾ ರ್ಕಳಬೆಟ್ಟು ಶಾಲಾ ಮುಖ್ಯೋಪಾಧ್ಯಾಯಿನಿ ಸಬಿತಾ ನೇತೃತ್ವದ ವಿದ್ಯಾರ್ಥಿಗಳ ತಂಡಕ್ಕೆ 30ಸಾವಿರ ರೂ. ನಗದು ಸಹಿತ ಪಶಸ್ತಿಯನ್ನು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 10 ಶಾಲೆಗಳಿಗೆ ಹಸಿರು ಪ್ರಶಸ್ತಿ ಮತ್ತು 10 ಶಾಲೆಗಳಿಗೆ ಹಳದಿ ಪ್ರಶಸ್ತಿಯನ್ನು ತಲಾ 5ಸಾವಿರ ರೂ. ನಗದಿನೊಂದಿಗೆ ನೀಡ ಲಾಯಿತು.
ಬಳಿಕ ಮಾತನಾಡಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಪ್ರಸ್ತುತ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅದರ ನಿಯಂತ್ರಣಕ್ಕೆ ಕಾನೂನಿನ ಮೂಲಕ ಕಠಿಣ ಕ್ರಮವನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಶಿಕ್ಷಕರು ಮಕ್ಕಳಲ್ಲಿ ಪರಿಸರದ ಬಗ್ಗೆ ಜ್ಞಾನ ಹಾಗೂ ಕಾಳಜಿ ಬೆಳೆಸಬೇಕು ಎಂದು ಹೇಳಿದರು.
ಮಾನವೀಯತೆ ಹಾಗೂ ಮೂಲಭೂತ ಕರ್ತವ್ಯಗಳನ್ನು ನಾವು ಮರೆಯ ಬಾರದು. ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳಿಗೆ ಹಾನಿ ಉಂಟು ಮಾಡುತ್ತದೆಯೆ ಹೊರತು ಅದರಿಂದ ಯಾವುದೇ ಪ್ರಯೋಜನ ಇಲ್ಲ. ಇಂಟರ್‌ನೆಟ್ ಗಳನ್ನು ಶಿಕ್ಷಣದ ಮಾಹಿತಿಗಾಗಿ ಬಳಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ ಎಲ್ಲಾ ಹಾನಿಕಾರವನ್ನು ಸೇರಿ ಸುವುದರಿಂದ ಪರಿಸರ ಮಲಿನಗೊಳ್ಳುತ್ತಿದೆ. ಇದರ ಪರಿಣಾಮ ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಸರಿಯಾದ ಮಳೆ ಬೀಳುತ್ತಿಲ್ಲ ಮತ್ತು ಚಳಿಗಾಲದಲ್ಲಿ ಬಿಸಿ ಏರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷ ಶಯನ ಕಾರಿಂಜ ವಹಿಸಿದ್ದರು. ವಿಟ್ಲ ಸಸ್ಯ ಶ್ಯಾಮಲಾದ ದಿನೇಶ್ ನಾಯಕ್ ‘ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಿರಣ್‌ಕುಮಾರ್, ದಿನಕರ ಶೆಟ್ಟಿ, ಪ್ರಭಾರ ಮಿತ್ಯಂತಾಯ ಉಪಸ್ಥಿತರಿದ್ದರು.
ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮೀಕಾಂತ್ ಸ್ವಾಗತಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
185 ಶಾಲೆಗಳ ಪೈಕಿ 21 ಶಾಲೆಗಳ ಆಯ್ಕೆ
‘ಜಿಲ್ಲೆಯ 1000ಕ್ಕೂ ಅಧಿಕ ಶಾಲೆಗಳ ಪೈಕಿ ಈ ವರ್ಷ 185 ಶಾಲೆಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 30 ಶಾಲೆಗಳ ವೌಲ್ಯಮಾಪನ ಮಾಡಿ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ, ಹಸಿರು ಮತ್ತು ಹಳದಿ ಶಾಲಾ ಪ್ರಶಸ್ತಿಗೆ ಒಟ್ಟು 21 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ಈ ಪಶಸ್ತಿಗೆ 306 ಶಾಲೆಗಳು ಅರ್ಜಿ ಸಲ್ಲಿಸಿದ್ದವು ಎಂದು ವೌಲ್ಯಮಾಪನ ಸಮಿತಿ ಸದಸ್ಯ ಪ್ರೊ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.
ತರಕಾರಿ ಕೈತೋಟ, ಔಷಧೀಯ ವನ, ದಾಸೋಹ, ತ್ಯಾಜ್ಯ ನಿರ್ವಹಣೆ, ವೈಜ್ಞಾನಿಕ ಮಾದರಿ, ಪ್ರಶಸ್ತಿ, ಜಲಪೂರಣ, ಮಳೆಕೊಯ್ಲು, ಸೋಲಾರ್ ಅಳವಡಿಕೆ, ಶಿಕ್ಷಕರ ಕ್ರಿಯಾಶೀಲತೆ, ವಿದ್ಯಾರ್ಥಿಗಳ ಭಾಗವಹಿಸುವಿಕೆ, ವಿನೂತನ ಕಲ್ಪನೆಯ ಯೋಜನೆ, ಶಾಲೆಯ ಒಟ್ಟು ಪರಿಣಾಮಗಳ ಮಾನದಂಡದ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿಯೂ ಖಾಸಗಿ ಶಾಲೆ ಗಳಿಗಿಂತ ಸರಕಾರಿ ಶಾಲೆಗಳೇ ಹೆಚ್ಚು ಭಾಗವಹಿಸಿವೆ ಎಂದರು.







