ಜಮ್ಮುಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ : ಪೊಲೀಸರ ಗುಂಡಿಗೆ ಇಬ್ಬರು ನಾಗರಿಕರು ಬಲಿ

ಶ್ರೀನಗರ, ಜ. 27: ಜಮ್ಮು ಕಾಶ್ಮೀರದ ಶೋಫಿಯಾನ ಜಿಲ್ಲೆಯಲ್ಲಿ ಹಿಂಸಾಚಾರಕ್ಕಿಳಿದ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆ ಯೋಧರು ಗುಂಡು ಹಾರಿಸಿದ ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶೋಫಿಯಾನ ಜಿಲ್ಲೆಯ ಗನೋವ್‌ಪೋರಾ ಗ್ರಾಮದ ಮೂಲಕ ಭದ್ರತಾ ಪಡೆಯ ವಾಹನ ಹಾದು ಹೋದಾಗ ಪ್ರತಿಭಟನಕಾರರು ಕಲ್ಲೆಸೆದರು.
ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆ ಯೋಧರು ಕೆಲವು ಸುತ್ತು ಗುಂಡು ಹಾರಿಸಿದರು. ಇದರಿಂದ ಹಲವರು ಗಾಯಗೊಂಡರು. ಗಂಭೀರ ಗಾಯಗೊಂಡ ಜಾವೇದ್ ಅಹ್ಮದ್ ಭಟ್ ಹಾಗೂ ಸುಹೈಲ್ ಜಾವಿದ್ ಲೋನೆ ಮೃತಪಟ್ಟರು.
ಚಿಂತಾಜನಕ ಸ್ಥಿತಿಯಲ್ಲಿರುವ ಇನ್ನೋರ್ವ ಯುವಕನ್ನು ಶ್ರೀನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಭದ್ರತಾ ಪಡೆಯ ಯೋಧರ ಗುಂಡಿಗೆ ಇಬ್ಬರು ಯುವಕರು ಸಾವನ್ನಪ್ಪಿದ ಬಳಿಕ ಗನೋವ್‌ಪೋರಾ ಹಾಗೂ ಸಮೀಪದ ಪ್ರದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story