ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ಕೆಲಸ ಮಾಡುತ್ತಿಲ್ಲ : ಪ್ರೊ.ವಿ. ಬಸವರಾಜು ಆತಂಕ
ಹಾಸನ,ಜ.27: ಕಾಲೇಜುಗಳಲ್ಲಿ ಕೇವಲ ಪಠ್ಯ ಭೋಧನೆ ಮಾಡುತ್ತಿದ್ದೇವೆ ಆದರೇ ಯುವಕರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಕೆಲಸ ಮಾಡಲಾಗುತ್ತಿಲ್ಲ ಎಂದು ಮೈಸೂರು ವಿಶ್ವ ವಿದ್ಯಾಲಯ ಉಪ ಕುಲಪತಿ ಪ್ರೊ.ವಿ. ಬಸವರಾಜು ಆತಂಕವ್ಯಕ್ತಪಡಿಸಿದರು.
ನಗರದ ಎನ್.ಆರ್. ವೃತ್ತದ ಬಳಿ ಇರುವ ಸೆಂಟ್ ಫಿಲೋಮಿನಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ, ರಾಜ್ಯ ಯೋಜನಾ ಆಯೋಗ, ನೆದರ್‍ಲ್ಯಾಂಡ್ ನ ನರೇಸುವಾನ್ ವಿಶ್ವ ವಿದ್ಯಾಲಯ ಹಾಗೂ ಮೈಸೂರಿನ ಅಭಿವೃದ್ಧಿ ಸಂಶೋಧನಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಅಭಿವೃದ್ದಿ ಮತ್ತು ಸಮಾಜ ಕಲ್ಯಾಣ ಎಂಬ ವಿಷಯ ಕುರಿತು ಪ್ರಥಮ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ವಿದ್ಯಾಲಯಗಳು ಯುವಕ-ಯುವತಿಯರಿಗೆ ಪಠ್ಯ ಬೋಧನೆ ಮಾಡುವುದರ ಜೊತೆಗೆ ಉದ್ಯೋಗವಕಾಶ ಕಲ್ಪಿಸುವ ಹೊಣೆಗಾರಿಕೆಯನ್ನು ಹೊರಬೇಕಾದ ಅವಶ್ಯಕತೆ ಇದೆ. ಹಾಗಾಗಿ ಹಾಲಿ ಇರುವ ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮಗಳು ಆಗಬೇಕಿದೆ. ವೃತ್ತಿ ಕೌಶಲ್ಯ ತರಬೇತಿ ಶಿಬಿರಗಳು ಇಂದು ಹೆಚ್ಚಾಗಿ ಏರ್ಪಡಿಸಬೇಕಾಗಿದ್ದು, ಆಮೂಲಕ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕ ಪಡೆದ ಅನೇಕರು ಉದ್ಯೋಗವಿಲ್ಲದೆ ಇಂದಿಗೂ ಕೂಡ ನಿರುದ್ಯೋಗಿಳಾಗಿಯೇ ಉಳಿದಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ಪ್ರತಿಯೊಬ್ಬರಿಗೆ ಶಿಕ್ಷಣ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯ. ಶೈಕ್ಷಣಿಕ ಅಭಿವೃದ್ದಿ ಮತ್ತು ಸಮಾಜ ಕಲ್ಯಾಣ ಎಂಬ ವಿಷಯ ಕುರಿತ ಪ್ರಥಮ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಒಂದು ವ್ಯಕ್ತಿಯನ್ನು ಹಾಗೂ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ. ದೇಶದಲ್ಲಿ ಉನ್ನತ ಶಿಕ್ಷಣ ಬಲವರ್ಧನೆ ಅಷ್ಟಾಗಿ ಇನ್ನು ಆಗಿಲ್ಲ. ಗುಣಮಟ್ಟದ ಬೋಧಕರು ಇಲ್ಲದೆ, ಗುಣಮಟ್ಟದ ಪಠ್ಯ ಭೋಧನೆ ಆಗುತ್ತಿಲ್ಲ. ದೇಶದ ಹಾಗೂ ರಾಜ್ಯದ ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಇಂದಿಗೂ ಹಳೇ ಪಠ್ಯಕ್ರಮವನ್ನೇ ಬೋಧನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳು ದೊರೆಯುತ್ತಿಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರ ನೇಮಕಾತಿಯಲ್ಲಿ ಹೊಸ ನಿಯಮಾವಳಿ ತರಬೇಕಾದ ಅವಶ್ಯಕತೆ ಇದೆ. ವಿಷಯದಲ್ಲಿ ತಜ್ಞರಿಲ್ಲದವರನ್ನು ನೇಮಕಾತಿ ಮಾಡಿಕೊಳ್ಳುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ನೇಮಕಾತಿ ವೇಳೆ ರಾಜಕಾರಣಿಗಳು, ಪ್ರಭಾವಿಗಳು ಹಸ್ತಕ್ಷೇಪ ಮಾಡುವುದರಿಂದ ಗುಣಮಟ್ಟದ ಶಿಕ್ಷಕರ ನೇಮಕ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಪಡೆಯುವವರಿಗೆ ಅನುಕೂಲದ ದೃಷ್ಠಿಯಲ್ಲಿ ಇಲ್ಲಿನ ಸರಕಾರವು ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಬೇಕಾಗಿದೆ. ಉನ್ನತ ಶಿಕ್ಷಣದಲ್ಲಿನ ವಿಜ್ಞಾನ ಸಂಶೋಧನೆಗಾಗಿ ಅವಶ್ಯಕತೆ ಇದೆ ಆದರೆ ಕೇಂದ್ರಗಳು ಗುಣಮಟ್ಟದಾಗಿರುವುದಿಲ್ಲ ಎಂದು ದೂರಿದ ಇದರಿಂದ ವಿದ್ಯಾರ್ಥಿಗಳು ಹೊರ ದೇಶಗಳಿಗೆ ಕಲಿಯಲು ಹೋಗಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಉಪ ಕುಲಪತಿ ಎಸ್.ಇಂದುಮತಿ ಮಾತನಾಡುತ್ತಾ, ದೇಶದ ಅಭಿವೃದ್ಧಿ ದೃಷ್ಠಿಯಲ್ಲಿ ಪ್ರತಿ ಮಗುವಿಗೂ ಶಿಕ್ಷಣ ಕೊಡಬೇಕು. ಆದರೇ ಇಂದು ನಾವು ವಿಫಲರಾಗಿದ್ದೇವೆ. ಸರಕಾರವು ಮೊದಲು ಶಿಕ್ಷಣಕ್ಕೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶೈಕ್ಷಣಿಕ ಅಭಿವೃದ್ದಿ ಮತ್ತು ಸಮಾಜ ಕಲ್ಯಾಣ ಎಂಬ ವಿಷಯಕ್ಕೆ ಅವಶ್ಯಕವಾಗಿರುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮಕ್ಕೆ ವಿವಿಧ ದೇಶಗಳಿಂದ ಪ್ರತಿನಿಧಿಯಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು ಆಗಮಿಸಿ ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ಕುಲಪತಿ ಎಂ. ಮಾದಯ್ಯ, ಕಲಿಂಗ ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್. ಚಂದ್ರಪ್ಪ, ಅಂತರಾಷ್ಟ್ರೀಯ ವಾಣಿಜ್ಯ ಮತ್ತು ಸಂಶೋಧನಾ ಶಾಲೆಯ ಮುಖ್ಯಸ್ಥ ಡಾ.ಸಿ. ಮನೋಹರ್, ಸಿಸ್ಟರ್ಸ್ ಆಫ್ ಚಾರಿಟಿ ಎಜುಕೇಷನ್ ಸೋಸೈಟಿ ಕಾರ್ಯದರ್ಶಿ ಗ್ರೇಸಿ ಜೋಸೆಫ್, ಭಾರತ ಸರಕಾರದ ಅರಣ್ಯ ಇಲಾಖೆಯ ಬಿ. ಚಿಕ್ಕಪ್ಪಯ್ಯ, ರಾಜ್ಯ ಲೋಕಸೇವಾ ಆಯೋಗದ ಸದಸ್ಯ ಲಕ್ಷ್ಮೀ ನರಸಯ್ಯ, ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ.ಕೆ. ಶಿವಚಿತ್ತಪ್ಪ, ಸಂತ ಫಿಲೋಮಿನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಾಸ್ಮಿನ್ ಕೊರಿಯ, ಉಪ ಪ್ರಾಂಶುಪಾಲ ದಿ.ಎಚ್. ರಾಘವ್, ಕಾಲೇಜಿನ ಮಾಧ್ಯಮ ಸಂಚಾಲಕ ತೇಜೇಶ್ ಪರಮೇಶ್ ಇತರರು ಉಪಸ್ಥಿತರಿದ್ದರು.