ಹಾಸನ: ಉರ್ದು ಸಾಹಿತಿ ಡಾ.ಅಲ್ಲಮಾ ಇಕ್ಬಾಲ್ ಕುರಿತು ವಿಚಾರ ಸಂಕಿರಣ
.jpg)
ಹಾಸನ,ಜ.27: ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳೂ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಾಜ್ಯ ಉರ್ದು ಅಕಾಡೆಮಿ, ರಹಬರ್ ವೆಲ್ಫೇರ್ ಸೊಸೈಟಿ ಹಾಗೂ ಅಲ್-ಅಮೀನ್ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಹಿರಿಯ ಉರ್ದು ಸಾಹಿತಿ ಡಾ.ಅಲ್ಲಮಾ ಇಕ್ಬಾಲ್ ಕುರಿತು ವಿಚಾರ ಸಂಕಿರಣ ಮತ್ತು ಸ್ವರ್ಣ ಸಂಚಿಕೆ ಬಿಡುಗಡೆ ಹಾಗೂ ಅಖಿಲ ಭಾರತ ಮಟ್ಟದ ಉರ್ದು ಕವಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಕಲಿತಂತಹ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯನ್ನು ಮುಚ್ಚುವಂತಹ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಶಾಲೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್ ಮಾತನಾಡಿ, ಕುವೆಂಪು ಅವರು ಸಣ್ಣ ವಯಸ್ಸಿನಿಂದಲೇ ಚಿಕ್ಕ ಚಿಕ್ಕ ಕವನ ಬರೆದುಕೊಂಡು ಬಂದವರು. ಇಂದು ಕೇವಲ ವೈದ್ಯರು, ಇಂಜಿನಿಯರ್, ಐಎಎಸ್ ಆಗಬೇಕು ಎಂಬ ಕನಸ್ಸನ್ನು ಇಟ್ಟುಕೊಂಡಿದ್ದಾರೆ. ಜೊತೆಯಲ್ಲಿ ಕವನ ರಚಿಸುವ ರೂಢಿಯನ್ನು ಬೆಳೆಸಿಕೊಂಡರೇ ಮನಸ್ಸಿಗೆ ಒಂದು ರೀತಿ ಮನೋಲ್ಲಾಸ ಉಂಟಾಗುತ್ತದೆ ಎಂದು ಕಿವಿಮಾತು ಹೇಳಿದರು. ನಮ್ಮ ದೇಶ ಭಾರತ ಎಲ್ಲಾ ಸಂಸ್ಕೃತಿಯ ಭಾಷೆಯನ್ನು ಒಳಗೊಂಡಿದೆ. ಮಕ್ಕಳಿಂದಲೇ ಸಣ್ಣ ಸಣ್ಣ ಕವನ ಬರೆಯಲು ಆರಂಭಿಸುವುದರ ಮೂಲಕ ದೊಡ್ಡ ಕವಿ ಆಗಬೇಕೆಂದು ಕರೆ ನೀಡಿದರು.
ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಪಿ. ಮೋಹನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಮೆದುಳನ್ನು ಚುರುಕುಗೊಳಿಸುತ್ತದೆ. ಎಲ್ಲಾ ಭಾಷೆಗಳಲ್ಲೂ ಕವನಗಳು ಇದ್ದು, ಇಂದಿನ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವರ್ಣ ಸಂಚಿಕೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿಗಳಾದ ಪ್ರೊಫೆಸರ್ ಶೇಖ್ ಅಲಿ ಅವರನ್ನು ನಾಗರಿಕರು ಸನ್ಮಾನಿಸಿ ಗೌರವಿಸಲಾಯಿತು. ಇದೆ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ವಾಡ್, ಪತ್ರಕರ್ತ ಆರ್.ಪಿ ವೆಂಕಟೇಶಮೂರ್ತಿ, ವೈದ್ಯ ಗುರುರಾಜ್ ಹೆಬ್ಬಾರ್, ವೈ.ಎಸ್. ವೀರಭದ್ರಪ್ಪ, ಮಹಾಮದ್ ಇಸಾಕ್, ಅಲ್-ಅಮೀನ್ ವಿದ್ಯಾಸಂಸ್ಥೆ ಅಧ್ಯಕ್ಷ ಸಯ್ಯದ್ ತಾಜ್, ಸಮಾಜಸೇವಕ ಅಮ್ಜದ್‍ಖಾನ್, ಆಲ್ ಮಿನ್ ಖಜಾಂಚಿ ಮುಜಿದ್, ಸದಸ್ಯ ತೌಫಿಕ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.







