ಅನುದಾನಿತ ನಿವೃತ್ತ ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣಕ್ಕೆ ಮನವಿ

ಮಂಗಳೂರು, ಜ.27: ಅನುದಾನಿತ ಶಾಲೆಗಳ ನಿವೃತ್ತ ಶಿಕ್ಷಕರಿಗೆ ರಜೆ ನಗದೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ನೌಕರರು ತಮ್ಮ ಸೇವಾವಧಿಯಲ್ಲಿ ಗಳಿಕೆ ರಜೆ ಪಡೆಯದೆ ಉಳಿಸಿಕೊಂಡು ಕಾರ್ಯನಿರ್ವಹಿಸಿ ನಿವೃತ್ತಿ ಅಂಚಿನಲ್ಲಿ ಈ ಸೌಲಭ್ಯವನ್ನು ಪಡೆಯುತ್ತಿರುವುದು ಸಂಪ್ರದಾಯ. ಆದರೆ ಹತ್ತು ತಿಂಗಳಿನಿಂದ ನಿವೃತ್ತರಾದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಿದಾಗ ಅನುದಾನದ ನೆಪಹೇಳಿ ಜಿಲ್ಲಾ ಖಜಾನೆಯಿಂದ ಹಿಂದಿರುಗಿಸಲಾಗುತ್ತದೆ. ಹಾಗಾಗಿ ಈ ಹಿಂದೆ ನೀಡುತ್ತಿದ್ದಂತೆ ಅನುದಾನಿತ ಶಾಲೆಗಳ ನಿವೃತ್ತ ಶಿಕ್ಷಕರಿಗೆ ರಜೆ ನಗದೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿಯ ನೇತೃತ್ವದಲ್ಲಿ ಶಿಕ್ಷಕರ ಸಂಘವು ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಮಖ್ಯ ಕಾರ್ಯದರ್ಶಿಗಳಿಗೆ ದ.ಕ. ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ರಾವ್, ಕೋಶಾಧಿಕಾರಿ ಸುಬ್ರಾಯ ಕಾರಂತ, ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಎಂ.ಎಚ್.ಮಲಾರ್, ಪಾಝಿಲ್ ನಿಯೋಗದಲ್ಲಿದ್ದರು.





