ಛತ್ತೀಸ್ಗಡದಲ್ಲಿ ಗುಂಡಿನ ಚಕಮಕಿ: ಇಬ್ಬರು ನಕ್ಸಲೀಯರ ಸಾವು

ಸಾಂದರ್ಭಿಕ ಚಿತ್ರ
ರಾಯಪುರ, ಜ. 27: ಛತ್ತೀಸ್ಗಡದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದ ನಡುವೆ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ನಕ್ಸಲೀಯರು ಮೃತಪಟ್ಟಿದ್ದಾರೆ.
ಚಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಟೆಡ್ಮೆಟ್ಲಾ ಹಾಗೂ ಮೋರ್ಪಲ್ಲಿ ಗ್ರಾಮಗಳ ನಡುವಿನ ದಟ್ಟ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಸುಕ್ಮಾ ಪೊಲೀಸ್ ಅಧೀಕ್ಷಕ ಅಭಿಶೇಕ್ ಮೀನಾ ತಿಳಿಸಿದ್ದಾರೆ.
ಇಲ್ಲಿಂದ 500 ಕಿ.ಮೀ. ದೂರದಲ್ಲಿರುವ ಚಿಂತಲ್ನಾರ್ನ ಅರಣ್ಯದಲ್ಲಿ ಕೋಬ್ರಾ 21ನೇ ಬೆಟಾಲಿಯನ್, ಕೇಂದ್ರ ಮೀಸಲು ಪಡೆಯ ವಿಶೇಷ ಘಟಕ ಹಾಗೂ ಸ್ಥಳೀಯ ಪೊಲೀಸರ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿತು ಎಂದು ಅವರು ತಿಳಿಸಿದ್ದಾರೆ.
ಟೆಡ್ಮೆಟ್ಲಾ ಹಾಗೂ ಮೋರ್ಪಲ್ಲಿ ನಡುವಿನ ಅರಣ್ಯ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿಯಿತು. ಈ ಸಂದರ್ಭ ನಕ್ಸಲೀಯರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಕೂಡ ಪ್ರತಿದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರು ಹತರಾದರು ಎಂದು ಅವರು ತಿಳಿಸಿದ್ದಾರೆ.
Next Story