ರಾಜ್ಯದಲ್ಲಿ ವಿಪಕ್ಷವಾಗಿ ಬಿಜೆಪಿ ವಿಫಲ,150 ಕ್ಷೇತ್ರಗಳಲ್ಲಿ ಅ.ಭಾ. ಹಿಂದೂ ಮಹಾಸಭಾ ಸ್ಪರ್ಧೆ: ನಾ.ಸುಬ್ರಹ್ಮಣ್ಯ ರಾಜು

ಮಂಗಳೂರು, ಜ. 27: ರಾಜ್ಯದಲ್ಲಿ ಬಿಜೆಪಿ ವಿರೊಧ ಪಕ್ಷವಾಗಿ ವಿಫಲವಾಗಿದೆ. ಅಖಿಲ ಭಾರತ ಹಿಂದೂ ಮಹಾ ಸಭಾ ವತಿಯಿಂದ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತವೆಂದು ಸಂಘಟನೆಯ ರಾಜ್ಯಾಧ್ಯಕ್ಷ ನಾ. ಸುಬ್ರಹ್ಮಣ್ಯ ರಾಜು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಹಾಗೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಅಲ್ಪ ಸಂಖ್ಯಾತರ ಓಲೈಕೆಗೆ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ವಾಪಾಸು ಪಡೆಯಲು ಸುತ್ತೋಲೆ ಹೊರಡಿಸಿದೆ. ಕೆಲವು ಉಗ್ರ ಸಂಘಟನೆಗಳು ಎಂದು ಪರಿಗಣಿಸಲ್ಪಟ್ಟವರ ಹೆಸರುಗಳನ್ನು ಕೈ ಬಿಡಲು ಸರಕಾರ ನಿರ್ಧರಿಸಿದೆ. ಕಾಂಗ್ರೆಸ್ ಸರಕಾರ ಈ ನಿರ್ಧಾರವನ್ನು ವಾಪಾಸು ಪಡೆಯಬೇಕು ಎಂದು ಸುಬ್ರಹ್ಮಣ್ಯ ರಾಜು ತಿಳಿಸಿದ್ದಾರೆ.
ಬಿಜೆಪಿಗೆ ಅವಕಾಶ ನೀಡಿ ಆಗಿದೆ : ಜೈಲಿಗೆ ಹೋದ ಮುಖ್ಯ ಮಂತ್ರಿ:- ಬಿಜೆಪಿಗೆ ರಾಜ್ಯದಲ್ಲಿ ಅವಕಾಶ ನೀಡಿ ಆಗಿದೆ. ಅಧಿಕಾರ ಹಿಡಿದ ಬಳಿಕ ಬಿಜೆಪಿ ನಾಯಕರು ಹಲವಾರು ಹಗರಣಗಳಿಗೆ ಕಾರಣರಾಗಿ ಒಬ್ಬ ಮುಖ್ಯಮಂತ್ರಿ ಜೈಲಿಗೂ ಹೋಗಿ ಆಗಿದೆ. ಆದುದರಿಂದ ಬಿಜೆಪಿ ಚುನಾವಣೆ ಎದುರಿಸುವ ನೈತಿಕತೆ ಕಳೆದುಕೊಂಡಿದೆ. ಅದಕ್ಕಾಗಿ ಬಿಜೆಪಿಯ ಮೋದಿ, ಅಮಿತ್‌ಶಾ ಹಲವು ಕಸರತ್ತು ನಡೆಸುತ್ತಿದ್ದಾರೆ. ಅಮಿತ್ ಶಾ ನಾನೇ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸುತ್ತೇನೆ ಎನ್ನುತ್ತಿದ್ದಾರೆ.
ಗೋಡ್ಸೆಯನ್ನು ಬೆಂಬಲಿಸುತ್ತೇವೆ:- ‘ಗಾಂಧಿಯನ್ನು ನಾನೇಕೆ ಕೊಂದೆ’ ಎನ್ನುವ ಪುಸ್ತಕದಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಗಾಂಧಿಯ ನಡವಳಿಕೆಗಾಗಿ ನಾನು ಗಾಂಧಿಯನ್ನು ಕೊಲ್ಲಬೇಕಾಯಿತು ಎನ್ನುವ ಸಮರ್ಥನೆಯನ್ನು ಗೋಡ್ಸೆ ನೀಡಿದ್ದು, ಈ ನಿಲುವನ್ನು ನಮ್ಮ ಸಂಘಟನೆ ಸಮರ್ಥಿಸುತ್ತದೆ. ಕರಾವಳಿಯಲ್ಲಿ ದೀಪಕ್ ರಾವ್, ಬಶೀರ್ ಹತ್ಯೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ನಮ್ಮ ಸಂಘಟನೆ ಹಿಂಸೆಗೆ ಪೋತ್ಸಾಹ ನೀಡುವ ಮಾತುಗಳನ್ನು ಆಡುವುದಿಲ್ಲ. ಭಾರತ -ಪಾಕಿಸ್ತಾನ ವಿಭಜನೆಯಾಗುವುದನ್ನು ವಿರೋಧಿಸಿತ್ತು ಎಂದು ಸುಬ್ರಹ್ಮಣ್ಯರಾಜು ತಿಳಿಸಿದ್ದಾರೆ.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ:- ಆಳ್ವಾಸ್ ಕಾಲೇಜಿನಲ್ಲಿ ಇತ್ತಿಚೆಗೆ ಹೆಣ್ಣು ಮಕ್ಕಳ ನಿಗೂಢ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸುಬ್ರಹ್ಮಣ್ಯ ರಾಜು ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಗಣೇಶ್ ಭಂಡಾರ್‌ಕರ್, ರಾಜೇಶ್ ಪವಿತ್ರನ್, ರವಿ ಎಂ, ಡಾ. ರಜಿತ್ ಎ, ಮೋಹನ್ ಧರ್ಮೇಂದ್ರ ಮೊದಲಾದವರು ಉಪಸ್ಥಿತರಿದ್ದರು.







