ಜೈವಿಕ ಪುತ್ರಿಯ ಮೇಲಿನ ಹಕ್ಕುಗಳನ್ನು ಬಿಟ್ಟುಕೊಟ್ಟ ಶೆರಿನ್ ದತ್ತು ಹೆತ್ತವರು

ಹ್ಯೂಸ್ಟನ್ (ಅಮೆರಿಕ), ಜ. 27: ಅಮೆರಿಕದ ಡಲ್ಲಾಸ್‌ನ ಚರಂಡಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 3 ವರ್ಷದ ಭಾರತೀಯ ಮಗು ಶೆರಿನ್ ಮ್ಯಾಥ್ಯೂಸ್‌ನ ಭಾರತೀಯ-ಅಮೆರಿಕನ್ ದತ್ತು ಹೆತ್ತವರು ತಮ್ಮ ಜೈವಿಕ ಪುತ್ರಿಯ ಮೇಲಿನ ಹಕ್ಕನ್ನು ತೊರೆದಿದ್ದಾರೆ.
ಮಗುವಿನ ಸುಪರ್ದಿ ಬಗ್ಗೆ ಶುಕ್ರವಾರ ನಡೆದ ವಿಚಾರಣೆಯ ವೇಳೆ, ವೆಸ್ಲಿ ಮತ್ತು ಸಿನಿ ಮ್ಯಾಥ್ಯೂಸ್ ನ್ಯಾಯಾಧೀಶರ ಮುಂದೆ ಕೈಕೋಳದೊಂದಿಗೆ ನಿಂತು ತಮ್ಮ ಜೈವಿಕ ಮಗುವಿನ ಮೇಲಿನ ಹೆತ್ತವರ ಹಕ್ಕುಗಳನ್ನು ತೊರೆಯಲು ಒಪ್ಪಿಕೊಂಡರು ಎಂದು ‘ಡಲ್ಲಾಸ್ ನ್ಯೂಸ್’ ವರದಿ ಮಾಡಿದೆ. ಇನ್ನು ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ.
ಅಕ್ಟೋಬರ್ 7ರಂದು ನಾಪತ್ತೆಯಾದ ಶೆರಿನ್‌ಳ ಮೃತದೇಹವು ನಿರಂತರ ಶೋಧದ ಬಳಿಕ ಅಕ್ಟೋಬರ್ 22ರಂದು ಉಪನಗರ ಡಲ್ಲಾಸ್‌ನ ಚರಂಡಿಯೊಂದರಲ್ಲಿ ಪತ್ತೆಯಾಯಿತು.
37 ವರ್ಷದ ದತ್ತು ತಂದೆ ವೆಸ್ಲಿಯ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. 35 ವರ್ಷದ ಸಿನಿ ವಿರುದ್ಧ ಮಗುವನ್ನು ಒಂಟಿಯಾಗಿ ಬಿಟ್ಟು ಅಪಾಯಕ್ಕೆ ಗುರಿಪಡಿಸಿದ ಆರೋಪವನ್ನು ಹೊರಿಸಲಾಗಿದೆ.
‘‘ತನ್ನ ವಿರುದ್ಧವಿರುವ ಕ್ರಿಮಿನಲ್ ಆರೋಪಗಳಿಂದಾಗಿ ಪರಿಸ್ಥಿತಿ ಡೋಲಾಯಮಾನವಾಗಿರುವ ಹಿನ್ನೆಲೆಯಲ್ಲಿ, ಮಗುವಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ಹೆತ್ತವರ ಹಕ್ಕುಗಳನ್ನು ಬಿಟ್ಟುಕೊಡುವ ಅತ್ಯಂತ ಕಠಿಣ ತೀರ್ಮಾನವನ್ನು ಸಿನಿ ತೆಗೆದುಕೊಂಡರು’’ ಎಂದು ಅವರ ವಕೀಲ ಮಿಚ್ ನೋಲ್ಟ್ ಹೇಳಿದರು.







