ಮಡಿಕೇರಿ; ಪುನರ್ ವಸತಿ ಕೇಂದ್ರಕ್ಕೆ ಸಚಿವರ ಭೇಟಿ : ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಮಡಿಕೇರಿ,ಜ.27:ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಕುಶಾಲನಗರ ಸಮೀಪದ ಬಸವನಹಳ್ಳಿಗೆ ದಿಢೀರ್ ಭೇಟಿ ನೀಡಿ ದಿಡ್ಡಳ್ಳಿ ಗಿರಿಜನ ನಿರಾಶ್ರಿತರಿಗೆ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯಗಳ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಕೊಡಗು ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಸಚಿನ್ ರವರಿಗೆ ದೂರವಾಣಿ ಕರೆ ಮಾಡಿ ಬರುವ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಗಿರಿಜನ ನಿರಾಶ್ರಿತರಿಗೆ ಈ ಮನೆಗಳಲ್ಲಿ ವಾಸಿಸಲು ಅನುವು ಮಾಡಿಕೊಡಬೇಕೆಂದು ತಾಕೀತು ಮಾಡಿದರು. ನಂತರ ಮಾತನಾಡಿದ ಅವರು ಈ ತಿಂಗಳಿನಲ್ಲೇ ಗಿರಿಜನ ನಿರಾಶ್ರಿತರಿಗೆ ವಾಸಿಸಲು ಮನೆಯನ್ನು ಸಿದ್ದಗೊಳಿಸಬೇಕೆಂಬುದು ನನ್ನ ಮಹದಾಸೆಯಾಗಿತ್ತು ಆದರೆ ಗುತ್ತಿಗೆದಾರನಿಗೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಬರುವ ತಿಂಗಳ ಕೊನೆಯ ವಾರದಲ್ಲಿ 174 ಮನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದು ಫೆಬ್ರವರಿ ಕೊನೆಯ ವಾರದಲ್ಲಿ ಮನೆಯ ಬೀಗದ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.
ಸರ್ಕಾರದ ಜನಪರ ಯೋಜನೆಗಳಿಗೆ ವಿರೋಧ ಪಕ್ಷಗಳು ಆರೋಪ ಮಾಡುವುದು ಸರ್ವೇಸಾಮಾನ್ಯ ಎಂದು ಇದೇ ಸಂದರ್ಭ ತಿಳಿಸಿದರು. ನಂತರ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕುಮುದ ಧರ್ಮಪ್ಪ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಗಿರಿಜನ ನಿರಾಶ್ರಿತ ನಿವಾಸಿಗಳಿಗೆ ನಿರ್ಮಿಸಲಾಗುತ್ತಿರುವ 174 ವಸತಿ ನಿರ್ಮಾಣ ಕಾಮಗಾರಿಯನ್ನು ಖುದ್ದು ಭೇಟಿ ನೀಡಿ ವೀಕ್ಷಿಸಿದ್ದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಬರುವ ತಿಂಗಳ ಕೊನೆಯ ವಾರದಲ್ಲಿ ಫಲಾನುಭವಿಗಳ ವಾಸಕ್ಕೆ ಮನೆಯನ್ನು ಬಿಟ್ಟುಕೊಡಬೇಕೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕೂಡ ಆದಷ್ಟು ಬೇಗ ಈ ಮನೆ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು. ಈ ಸಂದರ್ಭ ಗಿರಿಜನ ಮುಖಂಡರಾದ ಸ್ವಾಮಿ. ಮೋಹನ. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್. ಕೊಡಗು ನಿರ್ಮಿತಿ ಕೇಂದ್ರದ ಮೆಲ್ವಿಚಾರಕರಾದ ಯೋಗಾನಂದ್, ಬಸವರಾಜು, ಪ್ರಮುಖರಾದ ಗೌತಮ್ ಶಿವಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.







