ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪ
ಫೇಸ್‌ಬುಕ್ ಸಿಬ್ಬಂದಿಯ ವಿಚಾರಣೆ

ಸ್ಯಾನ್‌ಫ್ರಾನ್ಸಿಸ್ಕೊ, ಜ. 27: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸುತ್ತಿರುವ ನಿಯೋಜಿತ ವಕೀಲ ರಾಬರ್ಟ್ ಮುಲ್ಲರ್‌ರ ತನಿಖಾ ತಂಡವು ಫೇಸ್‌ಬುಕ್ ಸಿಬ್ಬಂದಿಯೋರ್ವರನ್ನು ತನಿಖೆಗೊಳಪಡಿಸಿದೆ ಎನ್ನಲಾಗಿದೆ.
ಫೇಸ್‌ಬುಕ್‌ನ ಈ ಸಿಬ್ಬಂದಿ ಟ್ರಂಪ್‌ರ ಅಧ್ಯಕ್ಷೀಯ ಪ್ರಚಾರ ತಂಡದೊಂದಿಗೆ ಗುರುತಿಸಿಕೊಂಡಿದ್ದರು.
‘‘2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಬಗ್ಗೆ ಮುಲ್ಲರ್ ನಡೆಸುತ್ತಿರುವ ತನಿಖೆಯ ಭಾಗ ಇದಾಗಿದೆ. ಒಂದು ವೇಳೆ, ರಶ್ಯ ಹಸ್ತಕ್ಷೇಪ ನಡೆಸಿದ್ದರೆ ಟ್ರಂಪ್‌ರ ಪ್ರಚಾರ ತಂಡ ಅದರಲ್ಲಿ ಯಾವ ಪಾತ್ರ ವಹಿಸಿತ್ತು ಎನ್ನುವುದನ್ನು ತಿಳಿಯುವುದಕ್ಕಾಗಿ ತನಿಖೆ ನಡೆಸಲಾಗಿದೆ’’ ಎಂದು ‘ದ ವಯರ್ಡ್’ ಶುಕ್ರವಾರ ವರದಿ ಮಾಡಿದೆ.
ಫೇಸ್‌ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳು ಈ ತನಿಖೆಯ ವ್ಯಾಪ್ತಿಯಲ್ಲಿವೆ.
‘‘ಮುಲ್ಲರ್‌ರ ತಂಡ ಫೇಸ್‌ಬುಕ್ ಉದ್ಯೋಗಿಯೊಂದಿಗೆ ಮಾತನಾಡಿದ ತಕ್ಷಣ ಫೇಸ್‌ಬುಕನ್ನು ಈ ಪ್ರಕರಣದಲ್ಲಿ ಸಿಕ್ಕಿಸಿಹಾಕಬೇಕೆಂದೇನಿಲ್ಲ. ಫೇಸ್‌ಬುಕ್ ಟ್ರಂಪ್ ಪ್ರಚಾರ ತಂಡಕ್ಕೆ ನಿಕಟವಾಗಿರುವುದು ಮಾತ್ರವಲ್ಲ, ರಶ್ಯದ ಪರವಾಗಿರುವ ಜನರಿಂದ ಪ್ರಭಾವಿತಗೊಂಡಿದೆ. ಹಾಗಾಗಿ, ಅದು ಮುಲ್ಲರ್‌ರ ಕಣ್ಣಿಗೆ ಬಿದ್ದಿರುವುದರಲ್ಲಿ ಅಚ್ಚರಿಯೇನಿಲ್ಲ’’ ಎಂದು ವರದಿ ಹೇಳಿದೆ.







