ಸೂಕ್ಷ್ಮ-ಅತಿಸೂಕ್ಷ್ಮ ಸಮುದಾಯಗಳ ಜತೆ ಬಜೆಟ್ ಪೂರ್ವ ಸಭೆ
‘ಅಲೆಮಾರಿ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಆಗ್ರಹ
ಬೆಂಗಳೂರು, ಜ. 27: ಹಕ್ಕಿಪಿಕ್ಕಿ, ಹಣಿಶಿಕಾರಿ, ಸುಡುಗಾಡು ಸಿದ್ಧರು, ಸಿಳ್ಳೆಕ್ಯಾತ, ದಕ್ಕಲಿಗ, ದೊಂಬರು ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಆಗ್ರಹಿಸಲಾಗಿದೆ.
ಶನಿವಾರ ನಗರದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಕೋಶದಿಂದ ಏರ್ಪಡಿಸಿದ್ದ ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ, ಅಲೆಮಾರಿ ಸಮುದಾಯದ ಜಾತಿಪ್ರಮಾಣ ಪತ್ರದ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಲಾಗಿದೆ.
ಅಲೆಮಾರಿ ಉದ್ಯಮಿಗಳಿಗೆ ಪ್ರಾತಿನಿಧ್ಯತೆ ನೀಡಿ, ಹೆಚ್ಚು ಹೊರೆಯಾಗುವಂತಹ ಮಾನದಂಡಗಳನ್ನು ಕೈಬಿಡಬೇಕು. ಪ್ರತಿ ಜಿಲ್ಲೆ, ತಾಲೂಕು, ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಬೇಕು. ಈ ಸಮುದಾಯದ ಜನರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು.
ಪ್ರಾಥಮಿಕ ಶಿಕ್ಷಣದಿಂದ ಸ್ನಾತ್ತಕೋತ್ತರ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು. ಮನೆ, ನಿವೇಶನ, ಈ ಸಮುದಾಯಗಳಿಗೆ ಬೇರೆಯಾದ ನಗರಗಳನ್ನು ನಿರ್ಮಿಸಿಕೊಡುವ ಮೂಲಕ ಸಮುದಾಯಕ್ಕೆ ಆಗುವ ತೊಂದರೆಗಳನ್ನು ನಿವಾರಿಸಬೇಕು. ಅಂತರ್ಜಾತಿಯ ವಿವಾಹ ಪ್ರೋತ್ಸಾಹ ನೀಡಬೇಕು.
ಅಲ್ಲದೆ, ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಉನ್ನತ್ತಿಗೆ ಆದ್ಯತೆ ನೀಡಬೇಕು. ಈ ಸಮುದಾಯಗಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಲಾಗಿದೆ.
ಸಭೆಯಲ್ಲಿ ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಕೋಶದ ನೋಡಲ್ ಅಧಿಕಾರಿ ಬಾಲಗುರುಮೂರ್ತಿ, ಅಲೆಮಾರಿ ಸಮುದಾಯಗಳ ಮುಖಂಡರಾದ ದಾನಪ್ಪ ಕಬ್ಬೇರು, ಡಾ.ವಡ್ಡಗೆರೆ ನಾಗರಾಜ್, ಜಾವಡೆ ಲೋಕೇಶ್, ಡಾ.ಚಂದ್ರಶೇಖರ್, ಡಾ.ಪ್ರದೀಪ್ ರಮಾವತ್ ಹಾಜರಿದ್ದರು.







