ನಾನೊಬ್ಬ ಜೀತಗಾರನ ಮಗ, ಹೆಮ್ಮೆಯಿಂದ ಹೇಳುತ್ತೇನೆ: ಡಾ.ಎಲ್.ಹನುಮಂತಯ್ಯ
ಬೆಂಗಳೂರು, ಜ.27: ನಮ್ಮ ತಾತ ತಳವಾರ, ನನ್ನ ತಂದೆ ಜೀತಗಾರನಾಗಿ ಹತ್ತಾರು ವರ್ಷಗಳು ದುಡಿದಿದ್ದಾರೆ. ಆದುದರಿಂದ ನಾನು ಇಂದಿಗೂ ನಾನೊಬ್ಬ ಜೀತಗಾರನ ಮಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.
ಶನಿವಾರ ನಗರದ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಸಾಧಕರಾಗಿ ಪಾಲ್ಗೊಂಡು ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಮ್ಮ ತಾತ ಸಾಲ ಮಾಡಿದ್ದರಿಂದ ಇದ್ದ ಭೂಮಿಯನ್ನ ಕಿತ್ತುಕೊಂಡಿದ್ದರು. ಇದರಿಂದ ನಮಗೆ ಭೂಮಿ ಇರಲಿಲ್ಲ. ನನ್ನ ತಂದೆ ಜೀತ ಮಾಡುತ್ತಿದ್ದ. ಆದರೆ, ಮದುವೆಯಾದ ಮೇಲೆ ಅವರು ಜೀತ ಮಾಡೋದನ್ನು ನಿಲ್ಲಿಸಿಬಿಟ್ಟಿದ್ದರು ಎಂದರು.
ನಮ್ಮ ಕುಟುಂಬದ ಇತಿಹಾಸದಲ್ಲಿ ಅಕ್ಷರ ಕಲಿತವನು ನಾನೇ ಮೊದಲಿಗೆ ಎನ್ನೋದಕ್ಕೆ ಹೆಮ್ಮೆ ಅನ್ನಿಸುತ್ತದೆ. ನನ್ನ ತಂದೆ-ತಾಯಿಗಳು ಯಾವತ್ತೂ ನೀನು ಜಾಸ್ತಿ ಓದಬೇಡ ಅಂದವರಲ್ಲ. ನಮ್ಮ ಮನೆಯಲ್ಲಿ ನಾನೊಬ್ಬನೇ ಮಗನಿದ್ದರೂ ಎಂದೂ ನನಗೆ ಅಡ್ಡಿಪಡಿಸಲಿಲ್ಲ ಎಂದ ಅವರು, ಶಾಲೆಯಲ್ಲಿ ಅಭ್ಯಾಸ ಮಾಡಬೇಕಾದ ಸಂದರ್ಭದಲ್ಲಿ 5 ಕಿ.ಮೀ. ದೂರ ದಿನನಿತ್ಯ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಬೆಳಗ್ಗೆ ಮನೆಯಲ್ಲಿ ಮಾಡಿದ ಮುದ್ದೆ ತಿಂದು ಹೋದರೆ ಮತ್ತೆ ರಾತ್ರಿವರೆಗೂ ಏನೂ ಸಿಗುತ್ತಿರಲಿಲ್ಲ. ಶಾಲೆಯ ದಿನಗಳು ನರಕಯಾತನೆ, ಬಿಡಿ ಎಂದು ಹೇಳಿದರು.
1973 ರಲ್ಲಿ ಎಸೆಸೆಲ್ಸಿ ಪಾಸ್ ಮಾಡಿ, ಪಿಯುಸಿಗೆ ಬೆಂಗಳೂರಿಗೆ ಹೋದೆ. ಆದರೆ, ಈ ಬೆಂಗಳೂರಿನಲ್ಲಿ ಕಾಲೇಜು ಸೇರಿದ ನಂತರ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು 100 ರೂ.ಗಳು ಡೆಪಾಸಿಟ್ ಕಟ್ಟಬೇಕಿತ್ತು. ಅಷ್ಟು ಹಣ ನನ್ನ ಬಳಿಯಿರಲಿಲ್ಲ. ಆಗ ಅಮ್ಮ ತನ್ನ ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿಕೊಟ್ಟು ನೀನು ಚೆನ್ನಾಗಿ ಓದು ಎಂದಿದ್ದರು ಎಂದು ನೆನೆಸಿಕೊಂಡು ಭಾವುಕರಾದರು.
ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿದ ನಂತರ ಕಾಲೇಜು, ಹಾಸ್ಟೆಲ್ ಎಲ್ಲಿದೆ ಎಂದು ಗೊತ್ತಾಗಲಿಲ್ಲ ಎಂದ ಅವರು, ಈ ನಗರದಲ್ಲಿ ಪಿಯುಸಿ ಹಾಗೂ ಇನ್ನಿತರೆ ಶಿಕ್ಷಣ ಪಡೆದಷ್ಟು ದಿನ ಎಂದೂ ನಗರಸಾರಿಗೆ ಬಸ್ ಹತ್ತಿರಲಿಲ್ಲ. ಮನೆಯಲ್ಲಿ ಬೆಂಗಳೂರಿಗೆ ಹೋಗಬೇಕಾದರೆ 5 ರೂ. ಕೊಡುತ್ತಿದ್ದರು. ಆದರೆ, ನಾನು ಮೂರು ರೂ.ಗಳು ಪಡೆದುಕೊಂಡು ಬರುತ್ತಿದೆ. ಅದರಲ್ಲಿ ಎರಡೂಕಾಲು ರೂ.ಗಳು ಬಸ್ ಟಿಕೆಟ್‌ಗೆ ಕೊಟ್ಟು ಉಳಿದ ಹಣದಲ್ಲಿ ಹಾಸ್ಟೆಲ್‌ಗೆ ಬೇಕಾದ ಪೇಸ್ಟ್, ಬ್ರಶ್, ಸಾಬೂನು ಕೊಂಡುಕೊಳ್ಳುತ್ತಿದ್ದೆ. ಹಾಸ್ಟೆಲ್‌ನಲ್ಲಿ ಓದಿದಷ್ಟು ದಿನ ನಗರದಲ್ಲಿ ಎಲ್ಲಿ ಸಿನೆಮಾ ಥಿಯೇಟರ್ ಇದೆ ಎಂದು ಕೂಡ ಗೊತ್ತಿರಲಿಲ್ಲ ನನಗೆ ಎಂದು ನುಡಿದರು.
ಬದುಕ ಬದಲಿಸಿದ ಬೆಂಗಳೂರು: ಇಲ್ಲಿನ ಕಾಲೇಜಿನಲ್ಲಿ ಮೊದಲ ಬಾರಿಗೆ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದ ನಂತರದಿಂದ ಹೆಚ್ಚು ಸಾಹಿತ್ಯ ಓದಲು ಆರಂಭ ಮಾಡಿದೆ. ಅನಂತರ ಕಾಲೇಜು ಚುನಾವಣೆಯಲ್ಲಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು. ಆದರೆ, ನನ್ನ ಬಳಿ ಯಾವುದೇ ಹಣ, ಆಡಂಬರವಿರಲಿಲ್ಲ. ಆದರೂ, ಚರ್ಚಾ ಸ್ಪರ್ಧೆಯಲ್ಲಿ ನಾನು ಮಾಡಿದ ಸಾಧನೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನಿಟ್ಟುಕೊಂಡು ಚುನಾವಣೆಯ ಪ್ರಚಾರ ಮಾಡಿ ಬಹುಮತದಿಂದ ಗೆದ್ದಿದ್ದೆ ಎಂದು ನೆನೆಸಿಕೊಂಡರು.
ಚುನಾವಣೆಯಲ್ಲಿ ನಾನು ಗೆದ್ದ ನಂತರ ಎಸ್‌ಎಫ್‌ಐ ಪತ್ರಿಕೆಯಲ್ಲಿ ನಮ್ಮ ಅಭ್ಯರ್ಥಿ ವಿಜಯ ಎಂದು ದೊಡ್ಡದಾಗಿ ಹಾಕಿಕೊಂಡಿದ್ದರು. ಅನಂತರದ ದಿನಗಳಲ್ಲಿ ಎಂ.ಕೆ.ಭಟ್ ಬೆಂಗಳೂರು ನಗರದ ಎಸ್‌ಎಫ್‌ಐ ಅಧ್ಯಕ್ಷರನ್ನಾಗಿ ಮಾಡಿದರು. ಅಲ್ಲಿಂದ ಚಳವಳಿ ಜೀವನ ಆರಂಭವಾಗಿ, ದಲಿತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಸೇರಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿದೆ. ಹಲವಾರು ಅಂಶಗಳನ್ನು ಸಮಾಜಕ್ಕೆ ಹಂಚಿದೆ ಹಾಗೂ ನಾನೂ ತಿಳಿದುಕೊಂಡೆ ಎಂದ ಅವರು, ನನ್ನ ಮದುವೆ ಕ್ರಾಂತಿಕಾರಿ ಮಾರ್ಗದಲ್ಲಿ ಆಗಬೇಕೆಂದು ಬಯಸಿದ್ದೆ. ಆದರೆ, ನಮ್ಮ ಪೋಷಕರು ಅದಕ್ಕೆ ಒಪ್ಪಲಿಲ್ಲ. ಹೀಗಾಗಿ, ಮದುವೆ ದಿನ ತಡವಾಗಿ ಹೋಗಿದ್ದೆ ಎಂದರು.
ಕವಿಯಾಗುವುದೇ ಶ್ರೇಷ್ಠ ಎಂದು ಕನಸು ಕಂಡಿದ್ದೆ. ಆದರೆ, ನಾನು ಬ್ಯಾಂಕ್‌ನ ಕೆಲಸ ಬಿಟ್ಟ ಮರುದಿನವೇ ಎಸ್.ಎಂ.ಕೃಷ್ಣ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದರು. ಈ ವೇಳೆ ನಾನು ಸದಸ್ಯ ಸ್ಥಾನದ ಅರ್ಜಿಯಲ್ಲಿ ಸ್ವತಂತ್ರ ಅಭ್ಯರ್ಥಿ ಎಂದು ಬರೆದಿದ್ದೆ. ಆದರೆ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಎಂದು ಬರೆಯಲು ತಿಳಿಸಿದ್ದರು. ಅಂದಿನಿಂದ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿಬಿಟ್ಟೆ ಎಂದು ರಾಜಕೀಯ ಜೀವನದ ಬಗ್ಗೆ ಅನುಭವ ಹಂಚಿಕೊಂಡರು.
ನಾನು ನೆಲಮಂಗಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅವಕಾಶ ಕೇಳಿದ್ದೇನೆ. ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರು ಒಪ್ಪಿದ್ದಾರೆ. ಸಾಧ್ಯವಾದರೆ ಮತ್ತೊಂದು ಬಾರಿ ವಿಧಾನಸಭೆ ಪ್ರವೇಶ ಮಾಡುತ್ತೇನೆ.
-ಡಾ.ಎಲ್.ಹನುಮಂತಯ್ಯ, ಮಾಜಿ ವಿಧಾನಪರಿಷತ್ ಸದಸ್ಯ







