ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನ ಕೈಜೋಡಿಸಬೇಕು.ನ್ಯಾ.ಅರಳಿ ನಾಗರಾಜು
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

ಮಂಡ್ಯ, ಜ.27: ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಭವ್ಯ ಭಾರತದ ಹಾಗೂ ಸದೃಡ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಅತಿ ಅವಶ್ಯಕ ಎಂದು ಕರ್ನಾಟಕ ಉಚ್ಚ ನ್ಯಾಯಲಯದ ನಿವೃತ್ತ ನ್ಯಾಯಧೀಶ ನ್ಯಾಯಮೂರ್ತಿ ಅರಳಿ ನಾಗರಾಜು ಹೇಳಿದ್ದಾರೆ.
ನಗರದ ಕಲಾಮಂದಿರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಮಾಜಿಕ ಅಂತಸ್ತು ಮತ್ತು ಜಾತಿಬೇಧವಿಲ್ಲದೇ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ ಎಂದರು.
ಪವಿತ್ರವಾದ ಮತದಾನದ ಹಕ್ಕನ್ನು ಸರಿಯಾಗಿ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಕರು ಕೈಜೊಡಿಸಬೇಕು. ಯುವ ಜನತೆ ಜಾಗೃತಿಯಾದರೆ ದೇಶ ಏಳಿಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ತಿಳಿಸಿದರು.
ಯುವಜನತೆಯಿಂದ ಮಾತ್ರ ಪ್ರಾಮಾಣಿಕ ಆಡಳಿತ ಸಾಧ್ಯ. ಇಂದಿನ ಯುವ ಪೀಳಿಗೆಯ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರ ನೆಡೆಯನ್ನು ದೇಶದ ಅಭಿವೃದ್ಧಿ ಪಥದ ಕಡೆಗೆ ಸಹಕಾರಿಯಾಗುವಂತೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಸಮಸಮಾಜ ನಿರ್ಮಾಣದಲ್ಲಿ ಭ್ರಷ್ಠಾಚಾರ ತಡೆಗೆ ಯುವಕರು ಪ್ರಮಖ ಪಾತ್ರವಹಿಸಬೇಕು. ಕ್ಷಣಿಕ ಸುಖಕ್ಕೆ ಆಮಿಷಗಳಿಗೆ ಒಳಗಾಗದೆ ಪ್ರಜ್ಞಾವಂತರ ಚುನಾಯಿಸಬೇಕು. ಈ ಬಗ್ಗೆ ತಮ್ಮ ಪೋಷಕರಿಗೂ ಅರಿವು ಮಾಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮನ್ಸೂರ್ ಅಹಮದ್ ಜ್ಹಮಾನ್ ಮಾತನಾಡಿ, ಮತದಾನ ಸಂವಿಧಾನದ ಅತ್ಯುತ್ತಮವಾದ ಹಕ್ಕು. ಪ್ರಾಮಾಣಿಕ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಯುವ ಮತದಾರರು ಚುನಾವಣೆಯಲ್ಲಿ ಅಲೋಚನೆ ಮಾಡಿ ಮತದಾನ ಮಾಡಬೇಕು. ಯುವಕರೇ ಭವಿಷ್ಯ ಭಾರತದ ರಾಯಭಾರಿಗಳು ಎಂದು ಹೇಳಿದರು.
ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಮತದಾನದಲ್ಲಿ ಸಕ್ರಿಯರಾಗಿರುವ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು. ಮಿಲೇನಿಯಂ ಮತದಾರರ ಪಟ್ಟಿಗೆ ಸೇರಿರುವ ಯುವಕರಿಗೆ ಚುನಾವಣಾ ಗುರುತಿನ ಚೀಟಿ ನೀಡಿ ಗೌರವಿಸಲಾಯಿತು.
ಜಿಪಂ ಸಿಇಓ ಬಿ.ಶರತ್ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪ ವಿಭಾಗಧಿಕಾರಿ ರಾಜೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಜಾಗೃತಿ ಜಾಥಾ: ಮತದಾರರ ದಿನಾಚರಣೆ ಸಂಬಂಧ ನಗರದ ವಿವಿಧೆಡೆ ಶಾಲಾ ಮಕ್ಕಳು ಮತದಾನ ಜಾಗೃತಿ ಜಾಥಾ ನಡೆಸಿದರು. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಮತದಾರರ ದಿನಾಚರಣೆ ಮತ್ತು ಜಾಗೃತಿ ಜಾಥಾಗಳು ನಡೆದವು.







