ಬಾಗೇಪಲ್ಲಿ : ರಾಷ್ಟ್ರೀಯ ಮತದಾರರ ದಿನಾಚರಣೆ

ಬಾಗೇಪಲ್ಲಿ,ಜ.27; ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ನಿಮ್ಮ ಊರು,ಗ್ರಾಮಗಳು ಅಭಿವೃದ್ದಿಯಾಗುತ್ತದೆ ಎಂದು ಪ್ರಥಮ ದರ್ಜೆ ನ್ಯಾಯಾಲಯ ಸಿವಿಲ್ ನ್ಯಾಯಾಧೀಶ ಅರ್.ಜೆ.ಎಸ್.ಪ್ರವೀಣ್ ತಿಳಿಸಿದರು.
ಅವರು ಶನಿವಾರ ಸರಕಾರಿ ಪದವಿ ಕಾಲೇಜಿನಲ್ಲಿ ರಾಜ್ಯ ಚುನಾವಣಾ ಆಯೋಗ,ತಾಲೂಕು ಕಾನೂನು ಮತ್ತು ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಟಾಟಿಸಿ ಮಾತನಾಡಿ ಕಳಂಕವಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಿಂದ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು,ರಸ್ತೆ ಹಾಗೂ ಮುಂತಾದ ಮೂಲಭೂತ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಮತದಾರರು ಉತ್ತಮ ಜನಪ್ರತಿಗಳನ್ನು ಆಯ್ಕೆ ಮಾಡಲು ಒತ್ತು ನೀಡಬೇಕಾಗಿದೆ.ಹಿರಿಯ ಮತದಾರರಿಗೆ ಯುವ ಮತದಾರರು ಜಾಗೃತಿ ಮೂಡಿಸಿ ದೇಶದ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ.ಜಾತಿಗಳ ಹೆಸರಿನಲ್ಲಿ ಮತಯಾಚನೆ ಮಾಡುವುದು ದೊಡ್ಡ ತಪ್ಪು ಆದರೆ ಜಾತಿ ಧರ್ಮಗಳ ಹೆಸರಿನಲ್ಲಿ ನಮ್ಮ ದೇಶದಲ್ಲಿ ಮತಯಾಚನೆ ಮಾಡಿಕೊಂಡು ಬರುತ್ತಿರುವುದು ರಾಜಕಾರಣಿಗಳು ರೂಢಿಸಿಕೊಂಡಿದ್ದಾರೆ.ಇಂತಹ ಅವ್ಯವಸ್ಥೆ ವಿರುದ್ದ ಯುವ ಜನಾಂಗ ಹೋರಾಟ ಮಾಡಿ ಜಾತಿಗಳ ಹೆಸರಿನಲ್ಲಿ ಮತಯಾಚನೆ ಮಾಡುವುದು ತಡೆಯಬೇಕಾಗಿದೆ.ಈ ದೇಶದ ಯುವಸಂಪತ್ತು ಈ ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕಾಗಿದೆ ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ ಮಾತನಾಡಿ ಪ್ರತಿ ವರ್ಷ ಜನವರಿ 25ರಂದು ಚುನಾವಣಾ ಆಯೋಗ ಸಂಸ್ಥಾಪನಾ ದಿನ,ಲಕ್ಷಾಂತರ ಯುವ ಜನತೆ ಪ್ರತಿ ಜನವರಿಯಲ್ಲಿ ದೇಶಾದ್ಯಂತ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುತ್ತಾರೆ.ಆದ್ದರಿಂದ ಯುವ ಮತದಾರರು ದಕ್ಷ ಮತ್ತು ಪ್ರಾಮಾಣಿಕ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಊರುಗಳ ಅಭಿವೃದ್ದಿಗೆ ಕಾರಣರಾಗಬೇಕಾಗಿದೆ.ಪ್ರಜಾಪ್ರಭುತ್ವದಲ್ಲಿ ವಿಶ್ವಾಸವುಳ್ಳ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ,ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕಾಗಿದೆ.ಜತೆಗೆ ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ,ಜನಾಂಗ, ಜಾತಿ,ಮತ,ಭಾಷೆ ಹಾಗೂ ಯಾವುದೇ ಪ್ರೇರೇಣೆಗಳಿಗೆ ಒಳಗಾಗದೆ ಮತ ಚಲಾಯಿಸಬೇಕಾಗಿದೆ ಎಂದರು.
18 ವರ್ಷಗಳು ತುಂಬ ಯುವ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು.ಶಿಕ್ಷಕ ಜಿ.ವಿ.ಚಂದ್ರಶೇಖರ್ ಅವರು ಮತದಾನದ ಮಹತ್ವ ಬಗ್ಗೆ ಹಾಡಿನ ಮೂಲಕ ತಿಳಿಸಿದರು.ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು.
ತಹಸೀಲ್ದಾರ್ ಮಹಮದ್ ಅಸ್ಲಂ,ಹಿರಿಯ ವಕೀಲ ಎ.ಜಿ.ಸುಧಾಕರ್,ನಿವೃತ್ತ ಗ್ರೇಡ್2 ತಹಸೀಲ್ದಾರ್ ಎಸ್.ಮುನಿರಾಮಯ್ಯ,ಸರಕಾರಿ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ನಾರಾಯಣಪ್ಪ,ಶಿಕ್ಷಕರಾದ ಕೆ.ವಿ.ಶ್ರೀನಿವಾಸ,ಆಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು.







