ಐಕ್ಯತೆಯ ಕೊರತೆಯಿಂದಾಗಿ ಮುಸ್ಲಿಮರಿಗೆ ಜಾಗತಿಕ ಸಮಸ್ಯೆ ಎದುರಾಗಿದೆ- ಮುಳ್ಳೂರ್‌ಕೆರೆ
ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ಗೋಲ್ಡನ್ ಜುಬಿಲಿ ಕಾರ್ಯಕ್ರಮ

ಸುಳ್ಯ, ಜ. 27: ಜಗತ್ತಿನಲ್ಲಿ ಮುಸ್ಲಿಂ ರಾಷ್ಟ್ರಗಳ ಸಂಖ್ಯೆ ಸಮುದಾಯದ ಜನಸಂಖ್ಯೆ ಗಣನೀಯ ಪ್ರಾಮಾಣದಲ್ಲಿದ್ದರೂ ಐಕ್ಯತೆಯ ಕೊರತೆಯಿಂದಾಗಿ ಇಂದು ಜಾಗತಿಕ ಸಮಸ್ಯೆಗಳ ಸವಾಲುಗಳು ಎದುರಾಗಿದೆ. ವಿಶ್ವಕ್ಕೆ ಶಾಂತಿ ಮತ್ತು ಸಹೋದರತೆಯನ್ನು ಸಾರಿದ ಇಸ್ಲಾಂ ಧರ್ಮದ ಅನುಯಾಯಿಗಳು ಪೂರ್ವಿಕರ ನೈಜ ಧಾರ್ಮಿಕತೆಯ ಅನುಸರಣೆಯತ್ತ ಮರಳಬೆಕು ಎಂದು ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ, ಖ್ಯಾತ ವಿದ್ವಾಂಸ, ಚಿಂತಕ ಅಲ್‌ಹಾಜ್ ಮುಳ್ಳೂರ್‌ಕೆರೆ ಮಹಮ್ಮದಾಲಿ ಸಖಾಫಿ ಕರೆ ನೀಡಿದರು.
ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ಗೋಲ್ಡನ್ ಜುಬಿಲಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯ ಪ್ರಭಾಷಣಗಾರರಾಗಿ ಅವರು ಮಾತನಾಡುತಿದ್ದರು.
ಆರ್ಥಿಕವಾಗಿ ಶಕ್ತವಾದ ರಾಷ್ಟ್ರಗಳು ತಮ್ಮ ತಪ್ಪು ನೀತಿಗಳಿಂದಾಗಿ ಅಧಪತನದತ್ತ ಸಾಗುತ್ತಿದೆ. ಪ್ರವಾದಿ ಆವರು ಸಾರಿದ ಸಂದೇಶ, ಸಮಾನತೆ ಮತ್ತು ಸಾಮರಸ್ಯದ ಜೀವನ ಅನ್ಯ ಧರ್ಮಿಯರು ಮುಸ್ಲಿಮರನ್ನು ಗೌರವಿಸುವಂತೆ ಮಾಡುತ್ತದೆ. ಆದರೆ ಈಗ ಚಿತ್ರಣವೇ ಬದಲಾಗಿದೆ ಅಹಿಂಸೆ, ವಿಶ್ವಾಸದ ಕೊರತೆ ಯಿಂದ ನಮ್ಮ ನಡವಳಿಕೆಯೇ ಇಸ್ಲಾಂ ಎಂದು ತಿಳಿದು ಇಂದಿನ ಪೀಳಿಗೆಗೆ ಧರ್ಮದ ಬಗ್ಗೆ ಅಪನಂಬಿಕೆ ಬರಲಾರಂಬಿಸಿದೆ ಇದನ್ನು ಹೊಗಲಾಡಿಸಲು ಕಟಿ ಬದ್ಧರಾಗಬೇಕು. ಯಾವುದೇ ಧರ್ಮದ ಬಗ್ಗೆ ಅಕ್ಷೆಪಾರ್ಹ ಬೇಡ, ನಿನ್ನ ಧರ್ಮವನ್ನು ಇತರರೂ ಗೌರವಿಸವ ರೀತಿಯಲ್ಲಿ ನಿನ್ನ ನಡುವಳಿಕೆ ಇರಲಿ ಎಂದು ಪ್ರವಾದಿ ಅವರು ತಿಳಿಸಿದ ವಚನ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಯಂ ಮುಸ್ತಫಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಶ್ರಾ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಅಝೀಝ್ ಕಾವು, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಸಂಶುದ್ದೀನ್, ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ, ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್, ಅಶ್ರಫ್ ಖಾಮಿಲ್ ಸಖಾಫಿ, ಉಪ್ಪಿನಂಗಡಿ ಅಲ್ ಮದೀನಾ ಮುನವ್ವರದ ಸಲಾಹುದ್ದೀನ್ ಸಖಾಫಿ, ಜಿ. ಇಬ್ರಾಹಿಂ ಕತಾರ್ ಮೊದಲಾದವರು ಉಪಸ್ಥಿತರಿದ್ದರು.







