ಸೇತುವೆ ಬಿರುಕು ಮುಚ್ಚಿ ಮಾನವೀಯತೆ ಮೆರೆದ ಪೊಲೀಸರು

ಚಿಕ್ಕಮಗಳೂರು, ಜ.27: ಪೊಲೀಸರೆಂದರೆ ಕಾನೂನು ಪಾಲನೆ, ಭಯದ ವಾತಾವರಣ, ಖಡಕ್ ಎಚ್ಚರಿಕೆ ಸೇರಿದಂತೆ ಹಿಂಸೆಯ ಮುಖವೇ ಕಾಣುವ ಹಲವು ಸಂದರ್ಭದಲ್ಲಿ ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುದು ಇಲ್ಲಿ ಸಾಬೀತಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಬೇಗೂರು ಹಾಗೂ ತಮ್ಮಟದಹಳ್ಳಿ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಅರ್ಧ ಅಡಿಯಷ್ಟು ಅಗಲದ ಬಿರುಕು ಬಿಟ್ಟಿತ್ತು. ಈ ವೇಳೆ ಸ್ವತಃ ಅಜ್ಜಂಪುರ ಪಿಎಸ್ಸೈ ರಮೇಶ್, ಯಗಟಿ ಪಿಎಸ್ಸೈ ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಬಿರುಕು ಬಿಟ್ಟ ಸೇತುವೆಗೆ ಪುಡಿ ಕಲ್ಲುಗಳನ್ನ ತುಂಬಿ, ಸಿಮೆಂಟ್‌ನಿಂದ ಸಾರಿಸಿ ನಂತರ ಪುಡಿ ಮಣ್ಣನ್ನ ಹಾಕಿ ಬಿರುಕನ್ನ ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಒಂದು ವಾರದಿಂದ ಅಜ್ಜಂಪುರ ಸಮೀಪದ ಅಂತರಗಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೊತ್ಸವ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿ ಹರಕೆ ತೀರಿಸುವುದು ಪ್ರತೀತಿ. ಹಾಗಾಗಿ ರೈತರ ಅತಿವೇಗದಲ್ಲಿ ಎತ್ತಿನ ಗಾಡಿಯನ್ನ ಓಡಿಸಿಕೊಂಡು ಬರುವಾಗ ಅಪಘಾತವಾಗುವ ಸಂಭವವಿತ್ತು. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಆಗಲಿದ್ದ ಅವಘಡಗಳನ್ನು ತಪ್ಪಿಸಿದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಜನಸಾಮಾನ್ಯರು, ವಾಹನ ವಾರರು ಪೊಲೀಸ್‌ರಿಗೆ ವಂದನೆಗಳನ್ನು ಸಲ್ಲಿಸಿದ್ದಾರೆ.







