ಆಶ್ರಮ ಶಾಲೆಯಲ್ಲಿ ಬುಡಕಟ್ಟು ಬಾಲಕಿ ಆತ್ಮಹತ್ಯೆ
ಪಾಲಗಢ (ಮಹಾರಾಷ್ಟ್ರ), ಜ.28: ಜಿಲ್ಲೆಯ ಸರ್ಕಾರಿ ವಸತಿ (ಆಶ್ರಮ) ಶಾಲೆಯಲ್ಲಿ ಓದುತ್ತಿದ್ದ 13 ವರ್ಷದ ಬುಡಕಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ದೆಹೆರ್ ವಸತಿ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿದ್ದ ಈ ಬಾಲಕಿ ಒಂದು ವಾರ ರಜೆ ಮೇಲೆ ಊರಿಗೆ ತೆರಳಿ ಜನವರಿ 26ರಂದು ಶಾಲೆಗೆ ವಾಪಸ್ಸಾಗಿದ್ದಳು ಎಂದು ಜವಾಹರ್ ಠಾಣೆಯ ಇನ್ಸ್ಪೆಕ್ಟರ್ ಡಿ.ಪಿ.ಬೋಯೆ ಹೇಳಿದ್ದಾರೆ.
ಅದೇ ದಿನ ಮಧ್ಯಾಹ್ನ ವೇಳೆ ಬಟ್ಟೆ ತೊಳೆಯಲು ಹೋಗುವುದಾಗಿ ಹೇಳಿ ತೆರಳಿದ್ದಳು. ಸಾಕಷ್ಟು ಸಮಯ ಕಳೆದರೂ ಬಾತ್ರೂಂನಿಂದ ಆಕೆ ಬಾರದಿದ್ದಾಗ ಸಹಪಾಠಿಗಳು ಹೋಗಿ ನೋಡಿದರು. ಆಗ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಯಿತು ಎಂದು ವಿವರಿಸಿದ್ದಾರೆ.
ಆತ್ಮಹತ್ಯೆ ಟಿಪ್ಪಣಿಯಲ್ಲಿ ಬಾಲಕಿ ಮತ್ತೊಬ್ಬಳು ಸಹಪಾಠಿಯೇ ತನ್ನ ಈ ನಿರ್ಧಾರಕ್ಕೆ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದೆ.
Next Story