ಮೊಗವೀರರನ್ನು ಎಸ್ಟಿಗೆ ಸೇರ್ಪಡೆಗೊಳಿಸುವ ವಿಚಾರ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಾಸ್ತಾಪಿಸಿ: ಜಿ.ಶಂಕರ್

ಉಡುಪಿ, ಜ.28: ರಾಜ್ಯದ 39 ಉಪಜಾತಿಗಳನ್ನೊಳಗೊಂಡ ಮೊಗವೀರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಈ ಬಾರಿಯ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಬೇಕು. ರಾಜಕೀಯ ಪಕ್ಷಗಳು ಕೇವಲ ಭಾಷಣ ಮಾಡಿ ನಮ್ಮನ್ನು ಮರಳು ಮಾಡುವ ಕೆಲಸ ಮಾಡಬಾರದು ಎಂದು ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದ್ದಾರೆ.
ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಿಲ್ಲಾ ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ರವಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಲಾದ ಗುರಿಕಾರರ ಸಮಾವೇಶ ಮತ್ತು ಮೊಗವೀರ ಯುವ ಸಂಘಟನೆ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಬಿಜೆಪಿಯ ಮುಖಂಡರು ಕೇಂದ್ರ ಸರಕಾರಕ್ಕೆ ಒತ್ತಡ ತರುವ ಕೆಲಸ ಮಾಡಬೇಕು. ಈ ಸಂಬಂಧ ಎಲ್ಲ ರಾಜಕೀಯ ಪಕ್ಷಗಳ ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಇದರಿಂದ ಸಮುದಾಯದ ಯುವ ಜನತೆಯ ಶಿಕ್ಷಣ ಹಾಗೂ ಉದ್ಯೋಗಗಳಿಗೆ ಸಹಾಯವಾಗಲಿದೆ ಎಂದರು.
ಕಾರವಾರದಿಂದ ಉಪ್ಪಳದವೆಗಿನ ಕರಾವಳಿ ಕರ್ನಾಟಕದಲ್ಲಿ ಸಮಗ್ರ ಮೀನು ಗಾರಿಕಾ ನೀತಿ ಜಾರಿ ಮಾಡುವ ಅಗತ್ಯವಿದ್ದು, ಈ ಸಂಬಂಧ ಮಹಾಜನ ಸಂಘ ಹಾಗೂ ಮೊಗವೀರ ಸಂಘಟನೆಗಳು ಚರ್ಚಿಸಿ ಮನವಿ ತಯಾರಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಮೊಗವೀರ ಯುವ ಸಂಘಟನೆ ಈಗಾಗಲೇ ಒಂದು ಲಕ್ಷ ಯುನಿಟ್ ರಕ್ತ ವನ್ನು ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಅಪಘಾತದ ಸಂದರ್ಭದಲ್ಲಿ ಗಾಯಾಳು ಗಳಿಗೆ ಸ್ಪಂದಿಸುವ ಬಗ್ಗೆ ಸಂಘಟನೆ ವತಿಯಿಂದ ಬೈಂದೂರಿನಿಂದ ಹೆಜಮಾಡಿ ವರೆಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಿ ಜನರಲ್ಲಿ ಅರಿವು ಮೂಡಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಮೊಗವೀರ ಸಮಾಜದ ಕೂಡುಕಟ್ಟಿನ ಎಲ್ಲ ನೀತಿ ನಿಯಮಗಳನ್ನು ಪಾಲಿಸು ತ್ತಿರುವ ಬಗ್ವಾಡಿ ಹೋಬಳಿಯ ಬೀಜಾಡಿ ಕೂಡಿಗೆಯ ಬಸವ ಗುರಿಕಾರ, ಬಾರಕೂರು ಹೋಬಳಿಯ ಬಜೆ ಮೇಲ್ಸಾಲು ಮೊಗವೀರ ಗ್ರಾಮ ಸಭಾ, ಉಚ್ಚಿಲ- ಮಂಗಳೂರು ಹೋಬಳಿಯ ಜನಾರ್ದನ ಗುರಿಕಾರ ಅವರನ್ನು ಸನ್ಮಾನಿಸಲಾಯಿತು.
ಮಂದಾರ್ತಿಯ ಅಕ್ಕು ಮರಕಾಲ್ತಿ, ಕೋಟ ನಾಗು ಮರಕಾಲ್ತಿ, ಕುಂದಾಪುರ ನಾಗಮ್ಮ, ಚಂದು ಕೋಟೇಶ್ವರ, ವೆಂಕಮ್ಮ ಬೈಂದೂರು, ಸುಂದರಿ ಬಂಗೇರ ಉದ್ಯಾವರ, ಗಿರಿಜಾ ಮೈಂದನ್ ಉಪ್ಪೂರು, ಕಮಲಾ ಕುಂದರ್ ಉಪ್ಪಿನ ಕೋಟೆ, ಲಲಿತಾ ಸಾಲ್ಯಾನ್ ಹೊಸಬೆಟ್ಟು, ಯಶೋದಾ ಸುವರ್ಣ ಬೇಳೂರು ಅವರಿಗೆ ತಲಾ 25 ಸಾವಿರ ರೂ. ನಗದು ಒಳಗೊಂಡ ಮತ್ಸೃಜ್ಯೋತಿ ಗೌರವ ಪುರಸ್ಕಾರವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಮೊಗವೀರ ಯುವ ಸಂಘಟನೆಯ ನಿರ್ಗಮನ ಅಧ್ಯಕ್ಷ ಗಣೇಶ್ ಕಾಂಚನ್ ಅವರು ನೂತನ ಅಧ್ಯಕ್ಷ ವಿನಯ್ ಕರ್ಕೇರಾ ಮಲ್ಪೆಅವರಿಗೆ ಅಧಿಕಾರ ಹಸ್ತಾಂತರಿಸಿದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಎಚ್.ಕರ್ಕೇರಾ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಶಾಖಾ ಧ್ಯಕ್ಷ ಕೆ.ಕೆ.ಕಾಂಚನ್, ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ತರ್ ಕೂರಾಡಿ, ಉದ್ಯಮಿ ಶಿವಪ್ಪಅಮೀನ್ ಉಪಸ್ಥಿತರಿದ್ದರು.
ಸಂಘಟನೆಯ ಮಾಜಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಸ್ವಾಗತಿಸಿದರು. ಶಂಕರ ಸಾಲ್ಯಾನ್ ವಂದಿಸಿದರು. ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.







