ಕನ್ನಡ ಪರ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ: ಎಲ್.ಎನ್.ಮುಕುಂದರಾಜು
ಬೆಂಗಳೂರು, ಜ. 28: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ನಾಡು, ನುಡಿಯ ಕುರಿತು ಆಸಕ್ತಿ ಇರುವ ಅಭ್ಯರ್ಥಿಗಳನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹಿರಿಯ ಕವಿ ಎಲ್.ಎನ್.ಮುಕುಂದರಾಜು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕರ್ನಾಟಕ ಸಾಹಿತ್ಯ ಪರಿಷತ್ ವಿಜಯನಗರದ ಪಂಪ ಸಭಾಂಗಣದಲ್ಲಿ ಕನ್ನಡ ಹೋರಾಟಗಾರ ಬೆ.ರ.ರಂಗರಾಜು ಸ್ಮರಣಾರ್ಥ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಳವಳಿಗಾರರು ರಾಜಕೀಯವಾಗಿ ಕಾರ್ಯಪ್ರವೃತ್ತರಾಗಬೇಕು. ಕನ್ನಡಪರ ನಿಲುವನ್ನು ಹೊಂದಿರುವ ಅಭ್ಯರ್ಥಿಗಳ ಗೆಲುವಿಗೆ ಒಟ್ಟಾಗಿ ಪ್ರಚಾರ ಮಾಡಬೇಕೆಂದು ತಿಳಿಸಿದರು.
ಹಿರಿಯ ಸಾಹಿತಿ, ಹೋರಾಟಗಾರರಾಗಿದ್ದ ಅ.ನ.ಕೃಷ್ಣರಾಯರು 60-70ರ ದಶಕದಲ್ಲಿಯೇ ಕನ್ನಡ ಸಾಹಿತಿಗಳು ಹಾಗೂ ಚಳವಳಿಗಾರರು ರಾಜಕೀಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೋರಾಟಗಳು ರೂಪಗೊಳ್ಳಬೇಕೆಂದು ಕರೆ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದರ ಪರಿಣಾಮ ರಾಜ್ಯದಲ್ಲೀಗ ನಾಡು, ನುಡಿ-ಜನತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಕನ್ನಡಪರ ಹೋರಾಟಗಾರರು ಈಗಿನಿಂದಲೆ ಚುನಾವಣೆಗೆ ಸಿದ್ಧರಾಗಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನ್ನಡ ಪರವಾದ ಆಶಯಗಳು ಎಷ್ಟರ ಮಟ್ಟಿಗಿದೆ, ಈಗಾಗಲೆ ಕನ್ನಡಕ್ಕಾಗಿ ಏನೆಲ್ಲ ಮಾಡಿದ್ದಾರೆ ಎಂಬ ಕುರಿತು ಸಾರ್ವಜನಿಕ ಚರ್ಚೆಗೆ ಒಳಪಡಿಸಿ, ಕನ್ನಡಪರ ನಿಲುವನ್ನು ಹೊಂದಿರುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿ ಗೆಲ್ಲಿಸಬೇಕೆಂದು ಅವರು ಹೇಳಿದರು.
ನಾಯಕರು ಹೈಕಮಾಂಡ್‌ನ ಗುಲಾಮರು: ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜಕಾರಣ ಮಾತ್ರ ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೆ ತೀರ್ಮಾನವನ್ನು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರ ಪರಿಣಾಮ ಕಾವೇರಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ವಿಷಾಧಿಸಿದರು.
ಜೈನ ಕವಿಗಳು ರನ್ನ, ಪಂಪ, ಜನ್ನರಂತಹ ಶ್ರೇಷ್ಟ ಕವಿಗಳು ಕನ್ನಡದ ಸಾಹಿತ್ಯ ಚಿಂತನೆಯನ್ನು ವಿಶ್ವ ಮಟ್ಟಕ್ಕೆ ತಲುಪಿಸಿದ್ದಾರೆ. ಹಾಗೂ 12ನೆ ಶತಮಾನದಲ್ಲಿ ಶರಣರು ಹಾಗೂ ಕುವೆಂಪು ಸಾಹಿತ್ಯ ಜನಸಾಮಾನ್ಯರ ಬದುಕನ್ನು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಾಹಿತ್ಯವನ್ನು ಯುವ ತಲೆಮಾರಿಗೆ ತಲುಪಿಸುವಂತಹ ಕೆಲಸವಾಗಬೇಕಿದೆ ಎಂದರು.
ಚಿಂತಕ ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ, ಭಾರತ ಒಂದು ಒಕ್ಕೂಟವೇ ಹೊರತು ರಾಷ್ಟ್ರವೆಂಬುದು ವಾಸ್ತವವಲ್ಲ. ಆದರೆ, ಕರ್ನಾಟಕ ಭಾಷೆ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ರಾಷ್ಟ್ರವಾಗಿ ರೂಪಗೊಳ್ಳುವ ಎಲ್ಲ ಅರ್ಹತೆಯನ್ನು ಹೊಂದಿದೆ. ಹೀಗಾಗಿ ಕರ್ನಾಟಕ ಪ್ರತ್ಯೇಕ ನಾಡಧ್ವಜ ಇರುವುದು ಅಗತ್ಯ ಎಂದು ತಿಳಿಸಿದರು.
ಹಿರಿಯ ಸಾಹಿತಿಗಳಾದ ಶ್ರ.ದೇ.ಪಾರ್ಶ್ವನಾಥ ‘10ನೆ ತರಗತಿವರೆಗೆ ಕನ್ನಡ ಭಾಷೆ ಕಡ್ಡಾಯ’ ಹಾಗೂ ಆರ್.ಜಿ.ಹಳ್ಳಿ ನಾಗರಾಜ ‘ಅಂತರ್‌ಧರ್ಮ,ಅಂತರ್ಜಾತಿ ವಿವಾಹಿತರಿಗೆ ಕಡ್ಡಾಯ ಉದ್ಯೋಗ’ದ ಕುರಿತು ಮಾತನಾಡಿದರು. ಹಿರಿಯ ಲೇಖಕ ತೊಂಟದಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ.ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.







