ಕಸ್ಗಂಜ್ ಹಿಂಸಾಚಾರ: 50 ಮಂದಿಯ ಬಂಧನ, ಅಂತರ್ಜಾಲ ಸ್ಥಗಿತ

ಲಕ್ನೊ, ಜ.28: ಶುಕ್ರವಾರದಂದು ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಬೈಕ್ ರ್ಯಾಲಿಯ ಸಂದರ್ಭ ಉಂಟಾದ ಗಲಭೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ ಪರಿಣಾಮ ಭುಗಿಲೆದ್ದ ಹಿಂಸಾಚಾರವು ಎರಡನೇ ದಿನವೂ ಮುಂದಿವರಿದಿದ್ದು, ಶನಿವಾರದಂದು ದುಷ್ಕರ್ಮಿಗಳು ಮೂರು ಅಂಗಡಿಗಳು, ಎರಡು ಖಾಸಗಿ ಬಸ್‌ಗಳು ಮತ್ತು ಒಂದು ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬುವುದನ್ನು ತಡೆಯುವ ಸಲುವಾಗಿ ಜನವರಿ 28ರ ರಾತ್ರಿ 10 ಗಂಟೆಯವರೆಗೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಸಿಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಕಾನೂನು ಸುವ್ಯವಸ್ಥೆ) ಆನಂದ ಕುಮಾರ್, ಮೂರು ಅಂಗಡಿಗಳ ಶಟರ್ ಅಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಎರಡು ಬಸ್ ಹಾಗೂ ಒಂದು ಕಾರಿಗೂ ಬೆಂಕಿ ಹಚ್ಚಲಾಗಿದೆ. ಶನಿವಾರದಂದು ಯಾವುದೇ ಹಿಂಸಾಚಾರ ನಡೆದಿಲ್ಲ. ಕೇವಲ ಶುಕ್ರವಾರ ಮಾತ್ರ ಗಲಭೆ ನಡೆದಿದ್ದು ಅದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.





