ನಮಗೆ ಬೀಫ್ ಕಟ್ಲೇಟ್ ನೀಡಲಾಗಿದೆ
ಕೇರಳದ ಕಾಲೇಜಿನ ವಿರುದ್ಧ ಉ.ಭಾರತದ ವಿದ್ಯಾರ್ಥಿಗಳ ಆರೋಪ

ತಿರುವನಂತಪುರಂ, ಜ.28: ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ನಮಗೆ ಬೀಫ್‌ನಿಂದ ತಯಾರಿಸಲ್ಪಟ್ಟ ಕಟ್ಲೆಟ್‌ಗಳನ್ನು ನೀಡಲಾಗಿದೆ ಎಂದು ಉತ್ತರ ಭಾರತೀಯ ವಿದ್ಯಾರ್ಥಿಗಳು ಆರೋಪ ಮಾಡಿರುವ ಘಟನೆ ಕೇರಳದ ಕುಟ್ಟನಾಡ್‌ನಲ್ಲಿರುವ ಕೊಚ್ಚಿನ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಗುರುವಾರ ನಡೆದಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಸರಕಾರಕ್ಕೆ ಪತ್ರ ಬರೆದಿದ್ದು, ನಮ್ಮ ಘನತೆಗೆ ಕುಂದುಂಟು ಮಾಡಲು ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಈ ಕಾಲೇಜಿನ ಆಡಳಿತ ಮಂಡಳಿಯೇ ಹೀಗೆ ಮಾಡಿದೆ ಎಂದು ಆರೋಪಿಸಿದ್ದಾರೆ. ತಮಗೆ ನೀಡಲಾದ ಕಟ್ಲೆಟ್ ಅನ್ನು ತಿಂದ ನಂತರವೇ ಅದರಲ್ಲಿ ಬೀಫ್ ಬಳಸಲಾಗಿದೆ ಎಂಬುದು ತಿಳಿಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ನಡೆದ ಕಾರ್ಯಾಗಾರದ ವೇಳೆ ವಿದ್ಯಾರ್ಥಿಗಳಿಗೆ ತಿನ್ನಲು ಕಟ್ಲೆಟ್ ನೀಡಲಾಗಿತ್ತು. ನಾವು ಅದನ್ನು ತೆಗೆದುಕೊಂಡಾಗಲೇ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ಅದು ಸಸ್ಯಾಹಾರಿ ಕಟ್ಲೆಟ್ ಎಂದು ಆತ ತಿಳಿಸಿದ್ದ. ಆದರೆ ಕೆಲವು ಮಲಯಾಳಿ ವಿದ್ಯಾರ್ಥಿಗಳು ಅದನ್ನು ತಿಂದ ನಂತರ ಅದಕ್ಕೆ ಬೀಫ್ ಹಾಕಲಾಗಿದೆ ಎಂದು ನಮಗೆ ತಿಳಿಸಿದರು. ಆದರೆ ಆ ವೇಳೆಗಾಗಲೇ ನಮ್ಮಲ್ಲಿ ಕೆಲವು ಸಸ್ಯಾಹಾರಿ ಮತ್ತು ಕೆಲವು ಬೀಫ್ ಸೇವಿಸದ ವಿದ್ಯಾರ್ಥಿಗಳು ಕಟ್ಲೆಟ್ ತಿಂದಾಗಿತ್ತು ಎಂದು ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ ಆಂಗ್ಲ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೆಲವು ಬ್ಯಾಂಕ್ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರೇ ತಿಂಡಿಯ ವ್ಯವಸ್ಥೆಯನ್ನೂ ಮಾಡಿದ್ದರು. ಹಾಗಾಗಿ ಬೀಫ್ ದೂರದ ಮಾತು. ವಿದ್ಯಾರ್ಥಿಗಳಿಗೆ ಮಾಂಸಾಹಾರ ತಿನಿಸು ನೀಡಲಾಗಿದೆ ಎಂಬ ಬಗ್ಗೆಯೇ ನನಗೆ ಮಾಹಿತಿಯಿರಲಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಸುನೀಲ್ ಕುಮಾರ್ ಎನ್. ತಿಳಿಸಿದ್ದಾರೆ.
ಕಾಲೇಜ್ ಕ್ಯಾಂಪಸ್‌ನಲ್ಲಿ ಸರಸ್ವತಿ ಪೂಜೆ ನಡೆಸಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಈ ಹಿಂದೆಯೂ ಪ್ರಾಂಶುಪಾಲರ ವಿರುದ್ಧ ಜಿಲ್ಲಾ ಆಯುಕ್ತರಿಗೆ ದೂರು ನೀಡಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.