ಆಧಾರ್ ಭಾರತದ ಅಭಿವೃದ್ಧಿಗೆ ಬಲ ನೀಡಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ,ಜ.28: ಆಧಾರ್ ದೇಶದ ಅಭಿವೃದ್ಧಿಗೆ ಭಾರೀ ಬಲವನ್ನು ನೀಡಿದೆ ಮತ್ತು ಈ ಹಿಂದೆ ಅನರ್ಹ ವ್ಯಕ್ತಿಗಳ ಕೈ ಸೇರುತ್ತಿದ್ದ ಲಾಭಗಳು ಈಗ ಉದ್ದೇಶಿತ ಫಲಾನುಭವಿ ಗಳಿಗೆ ಸೇರುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್‌ಸಿಸಿಯ 70ನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈ ಹಿಂದೆ ವ್ಯವಸ್ಥೆಯಲ್ಲಿಯ ಲೋಪಗಳಿಂದಾಗಿ ಇಂತಹ ಲಾಭಗಳನ್ನು ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ಇದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ದ್ವೇಷಭಾವನೆಯಿರುವುದು ತನ್ನ ಅನುಭವಕ್ಕೆ ಬರುತ್ತಿದೆ ಎಂದ ಅವರು, ಶ್ರೀಮಂತರಿಗೆ ಮತ್ತು ಪ್ರಭಾವಿಗಳಿಗೆ ಏನೂ ಆಗುವುದಿಲ್ಲ ಎಂಬ ನಂಬಿಕೆ ಈ ಹಿಂದೆ ಜನರಲ್ಲಿ ಮನೆ ಮಾಡಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಭ್ರಷ್ಟಾಚಾರವನ್ನು ಎಸಗಿದ್ದ ಮೂವರು ಮಾಜಿ ಮುಖ್ಯಮಂತ್ರಿಗಳು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದರು.
ಭ್ರಷ್ಟಾಚಾರದ ವಿರುದ್ಧ ಎಚ್ಚೆತ್ತುಕೊಳ್ಳುವಂತೆ ಯುವಜನತೆಯನ್ನು ಆಗ್ರಹಿಸಿದ ಪ್ರಧಾನಿ, ವಸ್ತುಗಳ ಖರೀದಿಗೆ ನಗದು ಹಣದ ಸೀಮಿತ ಬಳಕೆಯ ಶಪಥವನ್ನು ತೊಡುವಂತೆ ಮತ್ತು ಅದರ ಬದಲಿಗೆ ಭೀಮ್ ಆ್ಯಪ್ ಅಥವಾ ಡಿಜಿಟಲ್ ವಹಿವಾಟುಗಳ ಇತರ ವಿಧಾನಗಳನ್ನು ಬಳಸುವಂತೆ ಸೂಚಿಸಿದರು. ಇದು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ದೆಡೆಗಿನ ಹೆಜ್ಜೆಯಾಗಿದೆ ಎಂದರು.







