‘ಅಫ್‌ಸ್ಪಾ’ ಪುನರ್‌ಪರಿಶೀಲನೆಗೆ ಕಾಲವಿನ್ನೂ ಪಕ್ವಗೊಂಡಿಲ್ಲ: ಜ.ರಾವತ್

ಹೊಸದಿಲ್ಲಿ,ಜ.28: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಅಫ್‌ಸ್ಪಾ)ಯ ಕುರಿತು ಯಾವುದೇ ಪುನರ್‌ಪರಿಶೀಲನೆಗೆ ಅಥವಾ ಅದರ ಕೆಲವು ನಿಯಮಗಳನ್ನು ಸೌಮ್ಯಗೊಳಿಸಲು ಕಾಲವಿನ್ನೂ ಪಕ್ವಗೊಂಡಿಲ್ಲ ಎಂದು ಇತ್ತೀಚಿಗೆ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನ ವೊಂದರಲ್ಲಿ ಸ್ಪಷ್ಟಪಡಿಸಿರುವ ಭೂಸೇನೆಯ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು, ಜಮ್ಮು-ಕಾಶ್ಮೀರದಂತಹ ಅಶಾಂತ ಪ್ರದೇಶಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸುವಾಗ ಮಾನವ ಹಕ್ಕುಗಳನ್ನು ರಕ್ಷಿಸಲು ಸೇನೆಯು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳಲು ಅಥವಾ ಕನಿಷ್ಠ ಅದರ ಕೆಲವು ನಿಯಮಗಳನ್ನು ದುರ್ಬಲಗೊಳಿಸಲು ರಕ್ಷಣಾ ಮತ್ತು ಗೃಹಸಚಿವಾಲಯಗಳ ನಡುವೆ ಹಲವಾರು ಸುತ್ತುಗಳ ಉನ್ನತ ಮಟ್ಟದ ಚರ್ಚೆಗಳು ನಡೆದಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾವತ್ ಅವರ ಹೇಳಿಕೆಗಳು ಮಹತ್ವವನ್ನು ಪಡೆದುಕೊಂಡಿವೆ.
ಈ ಕಾಯ್ದೆಯು ಅಶಾಂತ ಪ್ರದೇಶಗಳಲ್ಲಿ ವಿವಿಧ ಕಾರ್ಯಾಚರಣೆಗಳನ್ನು ನಡೆಸಲು ಸೇನೆಗೆ ವಿಶೇಷ ಹಕ್ಕುಗಳು ಮತ್ತು ಕಾನೂನು ಕ್ರಮಗಳಿಂದ ರಕ್ಷಣೆಯನ್ನು ನೀಡುತ್ತದೆ. ಕಾಯ್ದೆಯನ್ನು ಹಿಂದೆಗೆದುಕೊಳ್ಳುವಂತೆ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿಯ ವಿವಿಧ ವರ್ಗಗಳು ಸುದೀರ್ಘ ಕಾಲದಿಂದ ಒತ್ತಾಯಿಸುತ್ತಿವೆ.
ಅಫ್‌ಸ್ಪಾ ಕೆಲವೊಂದು ಕಠಿಣ ನಿಯಮಗಳನ್ನು ಹೊಂದಿದೆಯಾದರೂ ಅದರಿಂದಾಗುವ ಇತರ ಹಾನಿಗಳ ಬಗ್ಗೆ ಸೇನೆಗೆ ಕಾಳಜಿಯಿದೆ ಮತ್ತು ಈ ಕಾಯ್ದೆಯಡಿ ಕಾರ್ಯಾಚರಣೆ ಗಳಿಂದ ಸ್ಥಳೀಯ ಜನರಿಗೆ ಅನಾನುಕೂಲವಾಗದಂತೆ ಅದು ಎಚ್ಚರಿಕೆಯನ್ನು ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಲು ಎಲ್ಲ ಮೂರೂ ಸಶಸ್ತ್ರ ಪಡೆಗಳನ್ನು ತೊಡಗಿಸಿಕೊಳ್ಳುವ ಸಂಯುಕ್ತ ನೀತಿಯನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆಯೇ ಎಂಬ ಪ್ರಶ್ನೆಗೆ ಜ.ರಾವತ್ ನೇರವಾಗಿ ಉತ್ತರಿಸಲಿಲ್ಲ. ಆದರೆ ವಿವಿಧ ಬಗೆಗಳ ಕಾರ್ಯಾಚರಣೆಗಳನ್ನು ನಡೆಸಲು ಸಶಸ್ತ್ರ ಪಡೆಗಳಿಗೆ ಪರ್ಯಾಯ ಆಯ್ಕೆಗಳು ಲಭ್ಯವಿವೆ. ಆದರೆ ನಾವು ಕೈಗೊಳ್ಳಬೇಕಾದ ಕಾರ್ಯಾಚರಣೆಗಳ ಸ್ವರೂಪಗಳಿಂದಾಗಿ ಇವುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಶತ್ರು ಜಾಗ್ರತಗೊಳ್ಳಲು ನೆರವಾಗುತ್ತದೆಯಷ್ಟೇ ಎಂದು ಅವರು ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಗಡಿಯಾಚೆಯ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಬಾಹ್ಯ ಮತ್ತು ಆಂತರಿಕ ಗುಪ್ತಚರ ಮಾಹಿತಿ ಸಂಗ್ರಹಣೆಯ ನಡುವೆ ಸಮನ್ವಯಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಶಸ್ತ್ರ ಪಡೆಗಳು ಮತ್ತು ಇತರ ಎಲ್ಲ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.