ಅಮಾಯಕರ ಕೊಲೆಗೆ ಪ್ರಚೋದನೆ: ಶೇಣವ ಬಂಧನಕ್ಕೆ ಆಗ್ರಹ

ಜಗದೀಶ್ ಶೇಣವ
ಮಂಗಳೂರು, ಜ. 28: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಬಶೀರ್ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವರ ಹೇಳಿಕೆ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಹಬ್ಬಿಸುವ ವ್ಯವಸ್ಥಿತ ಹುನ್ನಾರವನ್ನು ಬಯಲುಗೊಳಿಸಿದ್ದು, ಕೊಲೆ, ಕೋಮುಗಲಭೆಗೆ ಪ್ರಚೋದನೆಯಡಿ ಮೊಕದ್ದಮೆ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಹಿಂಸಾಚಾರ, ಮತೀಯ ದ್ವೇಷದ ಹಿನ್ನೆಲೆಯ ಪ್ರತೀಕಾರದ ಕೊಲೆಗಳ ಹಿಂದೆ ಕೋಮು ಸಂಘಟನೆಗಳ ವ್ಯವಸ್ಥಿತ ಕಾರ್ಯಾಚರಣೆಗಳಿವೆ. ಧರ್ಮದ ಆಧಾರದಲ್ಲಿ ನಡೆಯುವ ಪ್ರತೀ ಕೊಲೆಯನ್ನು ಸಂಘ ಪರಿವಾರ, ಬಿಜೆಪಿಯ ರಾಜಕೀಯ ಮುನ್ನಡೆಗಾಗಿ ಬಳಸುತ್ತಿದೆ. ಇಂತಹ ಕೊಲೆಗಳ ಹಿನ್ನೆಲೆಯಲ್ಲಿ ಅತಿಯಾದ ಧಾರ್ಮಿಕ ದ್ವೇಷ, ಪೂರ್ವಾಗ್ರಹಗಳು ಪ್ರಧಾನ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು.
ಜಗದೀಶ್ ಶೇಣವರಂತಹ ಮುಖಂಡರು ರಾಜಕೀಯ ಲಾಭಕ್ಕಾಗಿ ಮತ್ತೊಂದು ಧರ್ಮದ ವಿರುದ್ಧ ದ್ವೇಷ ಹುಟ್ಟಿಸುವ ಭಾಷಣಗಳನ್ನು ಪ್ರಚೋದಕವಾಗಿ ಆಡುತ್ತಾರೆ. ಇಂತಹ ಮಾತುಗಳಿಂದ ಪ್ರಚೋದಿತರಾದ ಯುವಕರು ಅಮಾಯಕರ ಕೊಲೆಗಳನ್ನು ನಡೆಸುತ್ತಾರೆ. ಕ್ರಿಮಿನಲ್ ಗಳಾಗಿ ಬದಲಾಗುತ್ತಾರೆ. ಇದರ ಪರಿಣಾಮವನ್ನು ಇಡೀ ಜಿಲ್ಲೆಯ ಜನ ಅನುಭವಿಸುತ್ತಿದ್ದಾರೆ ಎಂದರು.
ಇಡೀ ಜನ ಸಮುದಾಯ ದೀಪಕ್, ಬಶೀರ್ ರಂತಹ ಅಮಾಯಕರ ದಾರುಣ ಸಾವಿನಿಂದ ದು:ಖದಲ್ಲಿರುವಾಗ ಶೇಣವ ಈ ರೀತಿಯ ಅಮಾನವೀಯ ಮಾತುಗಳ ಮೂಲಕ ಜನರ ಮನಸ್ಸನ್ನು ಮತೀಯ ದ್ವೇಷದಿಂದ ಮತ್ತಷ್ಟು ಕೆರಳಿಸಲು ಯತ್ನಿಸಿರುವುದು ಆಘಾತಕಾರಿ. ಇಂತಹ ಮಾತುಗಳ ಮೂಲಕ ಜಿಲ್ಲೆಯ ಶಾಂತಿ ಕದಡುವ ವ್ಯಕ್ತಿಗಳಿಗೆ ಪೊಲೀಸ್ ಭದ್ರತೆ ಒದಗಿಸಿರುವುದು ತಪ್ಪು ಸಂದೇಶವನ್ನು ನೀಡುತ್ತದೆ. ಶೇಣವರಿಗೆ ಒದಗಿಸಿರುವ ಭದ್ರತೆ ವಾಪಾಸ್ ಪಡೆದು, ಕೋಮುಗಲಭೆಗೆ ಪಿತೂರಿ, ಕೊಲೆಗೆ ಪ್ರಚೋದನೆಯ ಸೆಕ್ಷನ್ ಗಳ ಅಡಿ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿರುವ ಮುನೀರ್ ಕಾಟಿಪಳ್ಳ ಬಶೀರ್ ಕೊಲೆಯ ಪಿತೂರಿಯಲ್ಲಿ ಶೇಣವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.







