ಗೋವಾ ಸ್ಪೀಕರ್ ನೇತೃತ್ವದ ನಿಯೋಗ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ
ಬೆಳಗಾವಿ, ಜ. 28: ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಗೋವಾ ರಾಜ್ಯದ ವಿಧಾನಸಭಾ ಸ್ಪೀಕರ್ ಪ್ರಮೋದ ಸಾವಂತ ಅವರ ನೇತೃತ್ವದ ಶಾಸಕರ ನಿಯೋಗ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರವಿವಾರ ಮಧ್ಯಾಹ್ನ 12:30ರ ಸುಮಾರಿಗೆ ಸ್ಪೀಕರ್ ನೇತೃತ್ವದ 40ಕ್ಕೂ ಅಧಿಕ ಮಂದಿಯ ನಿಯೋಗದ ಜತೆ ಗೋವಾದ ಮಾಧ್ಯಮ ಪ್ರತಿನಿಧಿಗಳು, ಅಲ್ಲಿನ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದರು. ಕೆಲ ದಿನಗಳ ಹಿಂದೆಯೆಷ್ಟೇ ಗೋವಾ ನೀರಾವರಿ ಸಚಿವ ವಿನೋದ್ ಪಾಳೇಕರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಯಾವುದೇ ಒಂದು ರಾಜ್ಯದ ನೀರಾವರಿ ಪ್ರದೇಶಕ್ಕೆ ಮತ್ತೊಂದು ರಾಜ್ಯ ಸರಕಾರದ ಪ್ರತಿನಿಧಿಗಳು ಭೇಟಿ ನೀಡುವ ಮೊದಲು ಅಲ್ಲಿಯ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಬೇಕೆಂಬ ನಿಯಮವನ್ನು ಗಾಳಿಗೆ ತೂರುತ್ತಿರುವ ಗೋವಾ ರಾಜ್ಯದ ಕ್ರಮ ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ತಡೆಯಬೇಡಿರೆಂದು ಸೂಚಿಸಿದ್ದೆ: ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಕಳಸಾ-ಬಂಡೂರಿ ನಾಲಾ ಯೋಜನೆ ಪ್ರದೇಶ ವೀಕ್ಷಣೆ ಮಾಡಿದೆ. ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರದನ್ವಯ ಅವರಜೊತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಗೋವಾ ಸ್ಪೀಕರ್ ನೇತೃತ್ವದ ನಿಯೋಗ ಬರುವ ಬಗ್ಗೆ ಕರ್ನಾಟಕ ರಾಜ್ಯಕ್ಕೆ ತಿಳಿಸಿರಲಿಲ್ಲ. ಅವರು ವೀಕ್ಷಣೆ ಮಾಡಿ ಹೋಗಲಿ. ನಾವು ಕಾಮಗಾರಿ ಮುಂದುವರಿಸಿಲ್ಲ. ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಫೆ.6 ರಿಂದ ಮಹದಾಯಿ ನ್ಯಾಯಮಂಡಳಿ ಮುಂದೆ ಅಂತಿಮ ಸುತ್ತಿನ ವಿಚಾರಣೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಗೋವಾ ರಾಜ್ಯದ ಪ್ರತಿನಿಧಿಗಳು ಕಳಸಾ- ಬಂಡೂರಿ ಪ್ರದೇಶದ ಕಾಮಗಾರಿ ಪರಿಶೀಲಿಸಿದ್ದಾರೆ ಎಂದು ಗೊತ್ತಾಗಿದೆ. ಈ ಮಧ್ಯೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಣಕುಂಬಿ ಪ್ರದೇಶಕ್ಕೆ ಗೋವಾ ಪ್ರತಿನಿಧಿಗಳು ಕದ್ದು ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
‘ಹಿರಿಯ ನ್ಯಾಯವಾದಿ ಫಾಲಿ ಎಸ್.ನಾರಿಮನ್ ಅನಾರೋಗ್ಯಕ್ಕೊಳಗಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸುವೆ. ಮಹದಾಯಿ ವಿಚಾರಣೆ ವೇಳೆ ನಾರಿಮನ್ ಬದಲಿಗೆ ಪರ್ಯಾಯ ನ್ಯಾಯವಾದಿಗಳು ರಾಜ್ಯದ ಪರ ವಾದ ಮಂಡನೆ ಮಾಡಲಿದ್ದಾರೆ. ನಾರಿಮನ್ ಅವರ ಸಲಹೆ ಪಡೆದು ಮುಂದುವರೆಯುತ್ತೇವೆ’
-ಸಿದ್ದರಾಮಯ್ಯ,ಮುಖ್ಯಮಂತ್ರಿ







