ಭ್ರಷ್ಟಾಚಾರ ದೇಶಕ್ಕೆ ಮಾರಕ: ನ್ಯಾ.ಬಿ.ವಿ.ನಾಗರತ್ನ
ಬೆಂಗಳೂರು, ಜ.28: ನಮ್ಮ ದೇಶದ ನಾಗರಿಕರು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಕೆಲ ಜನರು ಭ್ರಷ್ಟಚಾರವನ್ನು ಜೀವನದ ಒಂದು ಭಾಗವೆಂಬಂತೆ ಅಳವಡಿಸಿಕೊಂಡಿದ್ದಾರೆ. ಇದು ನಮ್ಮ ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಹೈಕೋರ್ಟಿನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ಬಿ.ರುದ್ರಗೌಡ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ರುದ್ರಾವಲೋಕನ’ ಸಂಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾಗರಿಕ ಸಮಾಜದಲ್ಲಿ ತೋರಿಕೆಗೆ ಹಕ್ಕುಗಳ ಬಗ್ಗೆ ಮಾತನಾಡುವ ಕೆಲವರು ಭ್ರಷ್ಟಚಾರವನ್ನು ಜೀವನದ ಒಂದು ಭಾಗವೆಂಬಂತೆ ಅಳವಡಿಸಿಕೊಂಡಿರುವುದು ಬೇಸರದ ಸಂಗತಿ ಎಂದ ಅವರು, ನ್ಯಾಯಾಧೀಶರ ಕೊರತೆಯಿಂದ ಶೀಘ್ರವಾಗಿ ಪ್ರಕರಣ ಇತ್ಯಾರ್ಥಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ಹಿಂದೆ ನ್ಯಾಯಾದೀಶ ವಕೀಲರೊಂದಿಗೆ ಉತ್ತಮ ಬಾಂಧವ್ಯ, ನಂಬಿಕೆ ಇತ್ತು. ಆದರೆ ಇಂದು ಗಂಡ-ಹೆಂಡತಿ ಮಕ್ಕಳಲ್ಲಿಯೇ ಆ ನಂಬಿಕೆ ಇಲ್ಲ. ಜೀವನದಲ್ಲಿ ಗುರಿ ಜತೆಗೆ ಪ್ರಾಮಾಣಿಕತೆ ಅಳವಡಿಸಿಕೊಂಡರೆ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ರುದ್ರಗೌಡರಂತಹ ವ್ಯಕ್ತಿಗಳು ತಮ್ಮ ಸಾಧನೆಯಿಂದ ಚಿರಾಯುವಾಗಿದ್ದಾರೆ. ವ್ಯಕ್ತಿಗಳು ಸಾಯಬಹುದು ಆದರೆ ವ್ಯಕ್ತಿತ್ವ ಸಾಯಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರೀಯ ವಕೀಲ ಜಯಕುಮಾರ್ ಎಸ್ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಸರೋಜ ರುದ್ರಗೌಡ, ವಕೀಲ ಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.







