ಬೆಂಗಳೂರು: ಐಎಸ್‌ಐ ಹೆಲ್ಮೆಟ್ ತಪಾಸಣೆ ಆದೇಶ ತಾತ್ಕಾಲಿಕವಾಗಿ ಹಿಂದಕ್ಕೆ
ಬೆಂಗಳೂರು, ಜ.28: ಐಎಸ್‌ಐ ಮಾರ್ಕ್ ಹೊಂದಿರದ ಹೆಲ್ಮೆಟ್ ಧರಿಸಿದರೆ ಫೆ.1ರಿಂದ 100 ರೂ ದಂಡ ನೀಡುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿದರೆ ಫೆ1 ರಿಂದ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದರು. ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದರೂ ಸದ್ಯಕ್ಕೆ ದಂಡ ವಿಧಿಸುವುದಿಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುವ ವಾಹನ ಸವಾರರ ವಿರುದ್ಧ ಫೆ. 1 ರಿಂದ 100 ರೂ. ದಂಡ ವಿಧಿಸುವ ಉದ್ದೇಶಿತ ಕಾರ್ಯಾಚರಣೆಯನ್ನು ನಡೆಸದಿರಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಗುಣಮಟ್ಟ ಪರಿಶೀಲನೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಹೆಲ್ಮೆಟ್ ತಪಾಸಣೆಯನ್ನು ಕೈಬಿಡಲಾಗಿದೆ. ಹೀಗಾಗಿ ಫೆ.1 ರ ಬಳಿಕ ದ್ವಿಚಕ್ರ ವಾಹನ ಸವಾರರು ಕಳಪೆ ಹೆಲ್ಮೆಟ್‌ಗೆ ದಂಡ ಕಟ್ಟಬೇಕಾಗಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಉತ್ತಮ ಎಂದು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.
ಹೆಲ್ಮೆಟ್‌ಗಳು ಬಿಐಎಸ್ ನಿಗದಿ ಪಡಿಸಿರುವ ಗುಣಮಟ್ಟವನ್ನು ಹೊಂದಿವೆಯೇ, ಇಲ್ಲವೇ ಎಂಬುದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ಬಿಐಎಸ್ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ, ಆ ಕುರಿತು ನಿರ್ದಿಷ್ಟ ಮಾರ್ಗಸೂಚಿ ಇಲ್ಲದ ಕಾರಣ ದಂಡ ವಿಧಿಸಲು ಆಗುವುದಿಲ್ಲ. ಹೀಗಾಗಿ, ಕಾರ್ಯಾಚರಣೆ ಯೋಜನೆ ಕೈಬಿಟ್ಟಿದ್ದೇವೆ ಎಂದಿನಂತೆ ಜಾಗೃತಿ ಮುಂದುವರೆಯಲಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ.
ವಿದೇಶಿ ಹೆಲ್ಮೆಟ್‌ಗಳ ಕುರಿತಾಗಿಯೂ ಗೊಂದಲವಿದೆ. ಸಾರಿಗೆ ಇಲಾಖೆಗೆ ಬರೆದ ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಒಟ್ಟಾರೆಯಾಗಿ ಹೆಲ್ಮೆಟ್‌ಗಳ ಗುಣಮಟ್ಟದ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ನಾವು ಕಾರ್ಯಾಚರಣೆ ನಡೆಸುವುದನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.







