ಕಾಶ್ಮೀರದಲ್ಲಿ ಇಬ್ಬರು ನಾಗರಿಕರ ಹತ್ಯೆ: ಸೇನೆಯ ವಿರುದ್ಧ ಎಫ್‌ಐಆರ್

ಶ್ರೀನಗರ, ಜ.28: ಶನಿವಾರದಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಇಬ್ಬರು ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನದಂದು ಶೋಪಿಯಾನ್ ಜಿಲ್ಲೆಯ ಗನೌಪೊರಾ ಗ್ರಾಮದಲ್ಲಿ ಪ್ರತಿಭಟನಾನಿರತರ ಮೇಲೆ ಸೇನೆಯು ಗುಂಡು ಹಾರಿಸಿದ ಪರಿಣಾಮ 20ರ ಹರೆಯದ ಯುವಕರಾದ ಜಾವಿದ್ ಭಟ್ ಮತ್ತು ಸುಹೈಲ್ ಲೋನ್ ಸಾವಿಗೀಡಾಗಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವ ಯುವಕ ಶ್ರೀನಗರದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಸೇನೆಯ 10ನೇ ಗಡ್ವಲ್ ರೈಫಲ್ಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 307 (ಹತ್ಯಾಯತ್ನ) ಮತ್ತು 336 (ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದು) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನಾಕಾರರು ತಮ್ಮ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅವರಿಂದ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವ ಪ್ರಯತ್ನವಾಗಿ ಗುಂಡು ಹಾರಿಸಿದ್ದೆವು ಎಂದು ಸೇನಾ ಮೂಲಗಳು ತಿಳಿಸಿವೆ.