ಮೈಮೇಲೆ ಹಚ್ಚೆಯಿದ್ದರೆ ಐಎಎಫ್‌ನಲ್ಲಿ ಉದ್ಯೋಗಕ್ಕೆ ಕುತ್ತು ತರಬಹುದು

ಹೊಸದಿಲ್ಲಿ,ಜ.28: ಮೈಮೇಲೆ ಕಾಯಂ ಹಚ್ಚೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆ(ಐಎಎಫ್)ಯಲ್ಲಿ ಉದ್ಯೋಗ ದೊರೆಯುತ್ತದೆ ಎಂಬ ಖಾತರಿಯಿಲ್ಲ. ಈ ಷರತ್ತಿಗೆ ಈಗ ನ್ಯಾಯಾಲಯದ ಸಮ್ಮತಿಯ ಮುದ್ರೆಯೂ ಬಿದ್ದಿದೆ. ತನ್ನ ಮುಂಗೈನ ಹೊರಭಾಗದಲ್ಲಿ ಕಾಯಂ ಹಚ್ಚೆಯನ್ನು ಹೊಂದಿದ್ದಕ್ಕಾಗಿ ಏರ್‌ಮನ್ ಹುದ್ದೆಗೆ ವ್ಯಕ್ತಿಯೋರ್ವನ ನೇಮಕವನ್ನು ರದ್ದುಗೊಳಿಸುವ ಐಎಎಫ್ ನಿರ್ಧಾರವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ರೂಢಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿರುವ ಬುಡಕಟ್ಟು ಜನರ ಪ್ರಕರಣಗಳು ಸೇರಿದಂತೆ ಕೆಲವು ಬಗೆಯ ಹಚ್ಚೆಗಳಿಗೆ ಐಎಎಫ್ ವಿನಾಯಿತಿಯನ್ನು ನೀಡಿದೆ.
ಅಭ್ಯರ್ಥಿಯ ಮೈಮೇಲಿನ ಹಚ್ಚೆಯು ಐಎಎಫ್ ನೀಡಿರುವ ವಿನಾಯಿತಿಗಳಿಗೆ ಅನುಗುಣವಾಗಿಲ್ಲ ಎನ್ನುವುದನ್ನು ಬೆಟ್ಟು ಮಾಡಿರುವ ನ್ಯಾಯಾಲಯವು, ಐಎಎಫ್‌ನ ಜಾಹೀರಾತಿನಲ್ಲಿ ಸೂಚಿಸಿದ್ದಂತೆ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ತನ್ನ ಮೈಮೇಲಿನ ಹಚ್ಚೆಯ ಚಿತ್ರವನ್ನು ಸಲ್ಲಿಸಲೂ ಅಭ್ಯರ್ಥಿಯು ವಿಫಲನಾಗಿದ್ದಾನೆ ಎಂದು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಮುಂಗೈನ ಒಳಭಾಗ, ಕೈ ಮತ್ತು ಹಸ್ತದ ಹಿಂಭಾಗ ಮತ್ತು ಬುಡಕಟ್ಟು ಜನರಲ್ಲಿ ಅವರ ಸಂಪ್ರದಾಯಗಳಿಗೆ ಅನುಗುಣವಾದ ಹಚ್ಚೆಗಳಿಗೆ ಮಾತ್ರ ವಾಯಪಡೆಯು ವಿನಾಯಿತಿ ನೀಡಿದೆ ಎಂದು ಐಎಎಫ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಇಂತಹ ಹಚ್ಚೆಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕನ್ನು ಆಯ್ಕೆ ಸಮಿತಿಯು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು.
ನೇಮಕಾತಿ ಪತ್ರ ಬಂದಾಗ ತನ್ನ ಮೈಮೇಲಿನ ಹಚ್ಚೆಯ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದ್ದೆ ಮತ್ತು ತಾನು ಅಧಿಕಾರಿಗಳಿಂದ ಯಾವುದನ್ನೂ ಬಚ್ಚಿಟ್ಟಿರಲಿಲ್ಲ ಎಂಬ ಅಭ್ಯರ್ಥಿಯ ವಾದವನ್ನು ನ್ಯಾಯಪೀಠವು ತಿರಸ್ಕರಿಸಿತು.
ಅಭ್ಯರ್ಥಿಯು 2016,ಸೆಪ್ಟೆಂಬರ್‌ನಲ್ಲಿ ಏರ್‌ಮನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಲಿಖಿತ,ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡ ಬಳಿಕ 2017, ಡಿ.24ರಂದು ಕರ್ತವ್ಯಕ್ಕೆ ಸೇರಿಕೊಳ್ಳುವಂತೆ ಆತನಿಗೆ ನೇಮಕಾತಿ ಪತ್ರವನ್ನು ಕಳುಹಿಸಲಾಗಿತ್ತು. ಆದರೆ ಆತ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಮರುದಿನವೇ ಮೈಮೇಲೆ ಕಾಯಂ ಹಚ್ಚೆಯನ್ನು ಹೊಂದಿದ್ದಾನೆಂಬ ಕಾರಣದಿಂದ ಆತನ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು.
ಅಭ್ಯರ್ಥಿಯು ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.