ರಾಜ್ಯದ 970 ಶಾಲೆಗಳ ವಿಲೀನ ಪ್ರಕ್ರಿಯೆಗೆ ತಡೆ: ಸಚಿವ ತನ್ವೀರ್ ಸೇಠ್

ಮೈಸೂರು,ಜ.28: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ 21 ಬೇಡಿಕೆಗಳು ಮತ್ತು ಶಿಫಾರಸ್ಸನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ತಿಳಿಸಿದರು.
ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕನ್ನಡ ಕ್ರಿಯಾಸಮಿತಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಶಾಲಾ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಸಮಸ್ಯೆಗಳ ಕುರಿತ ರಾಜ್ಯಮಟ್ಟದ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚಿಲ್ಲ. 970 ಶಾಲೆಗಳ ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಡೆಯಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಮತ್ತು ಖಾಸಗಿ ಶಾಲೆಗಳ ಶುಲ್ಕ ಕಡಿವಾಣ ಹಾಕುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 1 ರಿಂದ 10ನೇ ತರಗತಿವರೆಗೆ ಶಾಲೆ ತೆರೆಯಲು ಮತ್ತು ಹೋಬಳಿ ಮಟ್ಟದಲ್ಲಿ ಚಿಂತನೆಯೂ ಇದೆ. ಹೋಬಳಿ ಮಟ್ಟದಲ್ಲಿ 1 ರಿಂದ 12ನೇ ತರಗತಿವರೆಗೆ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಗುರಿ ಇದೆ. ಸೌಲಭ್ಯವಿದೆ ಬನ್ನಿ ಎಂಬುದಕ್ಕಿಂತ ಗುಣಮಟ್ಟದ ಶಿಕ್ಷಣ ಕೊಡುತ್ತೇವೆ ಬನ್ನಿ ಎಂದು ಕರೆಯುವಂತಾಗಬೇಕು ಎಂದು ತಿಳಿಸಿದರು.







