ಪುತಿನ್ ವಿರುದ್ಧ ಚಳವಳಿ: ರಶ್ಯ ಪ್ರತಿಪಕ್ಷ ನಾಯಕ ನವಾಲ್ನಿ ಬಂಧನ
90ಕ್ಕೂ ಅಧಿಕ ಬೆಂಬಲಿಗರು ವಶಕ್ಕೆ

ಮಾಸ್ಕೊ, ಜ.28: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಅಧಿಕಾರಾವಧಿಯನ್ನು 2024ರವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಡಲಿದೆಯೆಂದು ನಿರೀಕ್ಷಿಸಲಾಗಿರುವ ಚುನಾವಣೆಯನ್ನು ಬಹಿಷ್ಕರಿಸಲು ರಾಷ್ಟ್ರಾದ್ಯಂತ ಚಳವಳಿಯನ್ನು ಆರಂಭಿಸಿರುವ ಪ್ರತಿಪಕ್ಷ ನಾಯಕ ಅಲೆಕ್ಸಿಯಿ ನವಾಲ್ನಿ ಅವರನ್ನು ರಶ್ಯನ್ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಮಾಸ್ಕೊ ಸಮೀಪ ರ್ಯಾಲಿಯೊಂದರಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧನಕ್ಕೊಳಗಾಗುವ ಮುನ್ನ ತನ್ನನ್ನು ಸುತ್ತುವರಿದ ಬೆಂಬಲಿಗರೊಂದಿಗೆ ಮಾತನಾಡಿದ ಅವರು ಕಳ್ಳರು ಹಾಗೂ ವಂಚಕರು ದೇಶವನ್ನು ಆಳುತ್ತಿದ್ದಾರೆಂದು ಆರೋಪಿಸಿದರು.
ಮಾಚ್ 18ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯನ್ನು ಬಹಿಷ್ಕರಿಸಲು ನವಾಲ್ನಿ ನೀಡಿರುವ ಕರೆಗೆ ಸ್ಪಂದಿಸಿದ ಸಾವಿರಾರು ನಾಗರಿಕರು ಶನಿವಾರ ಹಲವಾರು ನಗರಗಳಲ್ಲಿ ರ್ಯಾಲಿಗಳನ್ನು ನಡೆಸಿ, ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಮಾಸ್ಕೊದಲ್ಲಿ ನವಾಲ್ನಿ ಪಾಲ್ಗೊಂಡ ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ನಗರಾದ್ಯಂತ ಬಿಗಿಭದ್ರತೆಯನ್ನು ಏರ್ಪಡಿಸಲಾಗಿತ್ತು. ದೇಶಾದ್ಯಂತ 90 ಮಂದಿ ಪುತಿನ್ ವಿರೋಧಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆಂದು, ಪ್ರತಿಭಟನೆಗಳನ್ನು ದಮನಕಾರ್ಯಾಚರಣೆಯ ಮೇಲೆ ನಿಗಾವಿರಿಸಿರುವ ಸಂಘಟನೆಯಾದ ಓವಿಡಿ-ಇನ್‌ಫೋ ವರದಿ ಮಾಡಿದೆ.
ರಶ್ಯದ ಎರಡನೆ ಅತಿ ದೊಡ್ಡ ನಗರವಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಾವಿರಕ್ಕೂ ಅಧಿಕ ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ‘‘ಪುತಿನ್ ಹೊರತಾದ ರಶ್ಯ ಬೇಕಿದೆ’’ ಹಾಗೂ ‘‘ ಪುತಿನ್ ಓರ್ವ ಕಳ್ಳ’’ ಎಂಬಿತ್ಯಾದಿ ಘೋಷಣೆಗಳನ್ನು ಅವರು ಕೂಗಿದರು.
ಮಾಸ್ಕೊದಲ್ಲಿ ನವಾಲ್ನಿಯವರ ರ್ಯಾಲಿಗೆ ಮುನ್ನ, ಪೊಲೀಸರು ಅವರ ಮುಖ್ಯಕಾರ್ಯಾಲಯದ ಬಾಗಿಲು ಮುರಿದು ಒಳಪ್ರವೇಶಿಸಿದ್ದು, ದೇಶದ ಈಶಾನ್ಯ ಭಾಗದಲ್ಲಿ ನಡೆಯುವ ಪ್ರತಿಭಟನೆಗಳ ನೇರಪ್ರಸಾರ ಮಾಡುವುದಕ್ಕೆ ತಡೆಯೊಡ್ಡಿದ್ದಾರೆಂದು ವರದಿಯಾಗಿದೆ.
ಈ ಮಧ್ಯೆ ನವಾಲ್ನಿಯವರ ಹಲವಾರು ಬೆಂಬಲಿಗರನ್ನು ಹಾಗೂ ಭ್ರಷ್ಟಾಚಾರ ವಿರೋಧಿ ಪ್ರತಿಷ್ಠಾನದ ಉದ್ಯೋಗಿಗಳನ್ನು ಕೂಡಾ ಪೊಲೀಸರು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ನವಾಲ್ನಿಯವರ ಬೆಂಬಲಿಗರು ದೇಶಾದ್ಯಂತ ಅನುಮತಿ ಪಡೆಯದೆ ರ್ಯಾಲಿಗಳನ್ನು ಆಯೋಜಿಸಿರುವುದು ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಡಲಿದೆಯೆಂದು ಪುತಿನ್ ಅವರ ವಕ್ತಾರ ಡಿಮಿಟ್ರ ಪೆಸ್ಕೊವ್ ಕಳೆದ ವಾರ ಕಠಿಣ ಎಚ್ಚರಿಕೆ ನೀಡಿದ್ದರು. ರ್ಯಾಲಿಗಳನ್ನು ಆಯೋಜಿಸಿದವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುವುದೆಂಬ ಪರೋಕ್ಷ ಸೂಚನೆಯನ್ನು ಅವರು ನೀಡಿದ್ದರು.
ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನವಾಲ್ನಿ ಯತ್ನಿಸಿದ್ದರಾದರೂ, ಕ್ರಿಮಿನಲ್ ಪ್ರಕರಣವೊಂದರಲ್ಲಿ ಅವರನ್ನು ದೋಷಿಯೆಂದು ಪರಿಗಣಿಸಲ್ಪಟ್ಟ ಹಿನ್ನೆಲೆಯಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದರು. ಆದರೆ ರಾಜಕೀಯ ದುರುದ್ದೇಶದಿಂದ ತನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆಯೆಂದು ನವಾಲ್ನಿ ಹೇಳಿದ್ದರು.
ರಶ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಸತತ ನಾಲ್ಕನೆ ಬಾರಿ ಪುನಾರಾಯ್ಕೆ ಬಯಸಿ ಪುತಿನ್ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಜಯಗಳಿಸಿದಲ್ಲಿ ಅವರು 2024ರವರೆಗೂ ರಶ್ಯದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುತಿನ್ ಶೇ.65ರಷ್ಟು ಮತಗಳನ್ನು ಪಡೆದಿದ್ದರು. ಆದರೆ ಈ ವರ್ಷ ಮತದಾನ ಪ್ರಮಾಣವನ್ನು ಅಧಿಕಗೊಳಿಸಲು ರಶ್ಯದ ಅಧಿಕಾರಿಗಳು ತೀವ್ರವಾಗಿ ಶ್ರಮಿಸುತ್ತಿದ್ದಾರೆ.







