ಸಂವಿಧಾನವೇ ದೇಶದ ಧರ್ಮಗ್ರಂಥ: ಎಚ್.ಕಾಂತರಾಜು
ಕುಂಬಾರರ ಜನಜಾಗೃತಿ ಸಮಾವೇಶ

ಮಂಡ್ಯ, ಜ.28: ಕುಂಬಾರರು ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳು ಸಂವಿಧಾನದ ಮಹತ್ವ ಮತ್ತು ಹಕ್ಕುಗಳ ಕುರಿತು ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಹೇಳಿದ್ದಾರೆ.
ಕುಂಬಾರ ಜಾಗೃತ ವೇದಿಕೆ, ಅಖಿಲ ಕರ್ನಾಟಕ ಕುಂಬೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಗರದ ರೈತಸಭಾಂಗಣದಲ್ಲಿ ರವಿವಾರ ನಡೆದ ಕುಂಬಾರರ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಪ್ರೊ.ಲಕ್ಷ್ಮೀಸಾಗರ್ ಅವರ ಹೆಸರಲ್ಲಿ ಕೊಡಮಾಡಲಾದ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ರಾಮಾಯಣ, ಮಹಾಭಾರತ ಗ್ರಂಥಗಳನ್ನು ಓದುವುದು ಅವರವರ ಧಾರ್ಮಿಕ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಆದರೆ, ಈ ದೇಶಕ್ಕೆ ಒಂದೇ ಧರ್ಮ. ಅದು ಸಂವಿಧಾನ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ. ಸಂವಿಧಾನದಲ್ಲಿರುವ ವಿಚಾರಗಳನ್ನು ಮನವರಿಕೆ ಮಾಡಿಕೊಂಡು ಹಕ್ಕುಗಳಿಗಾಗಿ ಹೋರಾಡುವ ಮನೋಭಾವವನ್ನು ಹಿಂದುಳಿದ ವರ್ಗಗಳು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮನೆಯಲ್ಲಿ ಯಾವುದೇ ಪುಸ್ತಕ ಇರಲಿ, ಇಲ್ಲದಿರಲಿ, ಆದರೆ, ಮನೆಗೊಂದು ಸಂವಿಧಾನವನ್ನು ಇಟ್ಟುಕೊಳ್ಳಬೇಕಾದ ಅಗತ್ಯತೆ ಇದೆ. ಎಲ್ಲ ವರ್ಗದವರಿಗೂ ಸಮಪಾಲು, ಸಮಾನ ಅವಕಾಶದ ಬದುಕನ್ನು ಕಲ್ಪಿಸಿಕೊಡುವ ಸಂವಿಧಾನದ ಆಶಯಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಅವರು ಹೇಳಿದರು.
ಕುಂಬಾರ ಸಮುದಾಯ ಸ್ಥಿತಿಗತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕ ಮತ್ತು ರಾಜಕೀಯವಾಗಿ ಕುಂಬಾರರ ಸ್ಥಿತಿ ಶೋಚನೀಯವಾಗಿದೆ. ಇದನ್ನು ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಸರಕಾರಕ್ಕೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ದೇಶದಲ್ಲಿ ಆರ್ಥಿಕ ಅಸಮಾನತೆ ಹೋಗಬೇಕಾದರೆ ದುಡಿಯುವ ವರ್ಗಕ್ಕೆ ಮಾನ್ಯತೆ ನೀಡಬೇಕು. ಶ್ರಮಕ್ಕೆ ಪೂರಕವಾದ ಸಂಭಾವನೆ ಕೊಡುವ ಪದ್ಧತಿ ಜಾರಿಯಾಗಬೇಕು. ಎಲ್ಲ ವರ್ಗದವರು ಸಮಾನವಾಗಿ ಬದುಕಲು ಮೀಸಲಾತಿಯ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರಿಗೆ ಸರ್ವಜ್ಞ ಪ್ರಶಸ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಬು ಕುಂಬಾರಗೆ ರತ್ನಪ್ಪ ಕುಂಬಾರ ಪ್ರಶಸ್ತಿ, ತಬಲ ನಾರಾಯಣಪ್ಪ, ಎಲ್.ಶ್ರೀನಿವಾಸ್, ನಾರಾಯಣ್, ಲಲಿತಾಶ್ರೀ ಹಾಗೂ ಶಿವಲಿಂಗಶೆಟ್ಟಿ ಅವರಿಗೆ ಕುಂಭರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕರಾದ ಡಿ.ಸಿ.ತಮ್ಮಣ್ಣ, ಪಿ.ಎಂ.ನರೇಂದ್ರಸ್ವಾಮಿ, ಕ್ರೆಡಿಟ್ ಐ ಸಂಸ್ಥೆಯ ಸಿಇಒ ಡಾ.ಎಂ.ಪಿ.ವರ್ಷ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಕುಂಭೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕುಂಬಾರ ಯುವ ಸಂಘದ ಅಧ್ಯಕ್ಷ ಶಂಕರ್‍ಶೆಟ್ಟಿ, ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ನೌಕರ ಘಟಕದ ಅಧ್ಯಕ್ಷ ಕಾಂತರಾಜು, ಕೋಲಾರ ಕುಂಬಾರ ಸಂಘದ ಅಧ್ಯಕ್ಷ ಕಲ್ಲಂದೂರು ಶ್ರೀನಿವಾಸ್, ಕುಂಬಾರ ಸಮಾಜದ ಮುಖಂಡರಾದ ದಕ್ಷಿಣಾಮೂರ್ತಿ, ಡಾ.ನಾಗರಾಜು, ಸೋಮಸುಂದರ್, ವಿ.ಎಲ್.ಮಂಜುನಾಥ್, ಗಿರೀಶ್, ಚಿಕ್ಕವೀರಯ್ಯ, ಎಂ.ಕುಮಾರ್ ಇತರರಿದ್ದರು.







