ಸರಕಾರಿ ಸೌಲಭ್ಯ ಪಡೆಯಲು ನಕಲಿ ಜಾತಿ ಪ್ರಮಾಣ ಪತ್ರ: ದಲಿತ ಕುಂದುಕೊರತೆ ಸಭೆಯಲ್ಲಿ ಆರೋಪ
ಮಂಗಳೂರು, ಜ. 28: ಸರಕಾರದ ಸೌಲಭ್ಯವನ್ನು ಪಡೆಯಲು ತಂದೆಯೋರ್ವ ಮಗನ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಲಿತ ಮುಖಂಡರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಗರದಲ್ಲಿ ರವಿವಾರ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಈ ಆಗ್ರಹ ಕೇಳಿ ಬಂತು.
ಮೂಲತಃ ಆಂದ್ರ ನಿವಾಸಿ ಪ್ರಸ್ತುತ ಮೇರಿಹಿಲ್‌ನಲ್ಲಿ ವಾಸಿಸುತ್ತಿರುವ ಶಿವಾನಂದನ್ ಎಂಬವರು ಮಗ ಕಾರ್ತಿಕೇಯನ್ ಹೆಸರಿನಲ್ಲಿ ಮಾಡಿದ ಜಾತಿ ಪ್ರಮಾಣ ಪತ್ರ ಸುಳ್ಳಾಗಿದ್ದು, ಸರಕಾರಿ ಸೌಲಭ್ಯ ಪಡೆದುಕೊಳ್ಳಲು ಮಾಡಿರುವ ತಂತ್ರವಾಗಿದೆ ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ಆರೋಪಿಸಿದರು.
ಸುಳ್ಳು ಜಾತಿ ಪ್ರಮಾಣದ ಪತ್ರ ಪಡೆದ ಕುಟುಂಬ ನಾಯ್ಡು ಸಮುದಾಯಕ್ಕೆ ಸೇರಿದ್ದಾಗಿದೆ. ಇಂತಹ ಪ್ರಮಾಣ ಪತ್ರ ನೀಡಲು ಕಾರಣಕರ್ತರಾದ ಶಿಕ್ಷಣ ಸಂಸ್ಥೆ, ಕರ್ನಾಟಕ ರಾಜ್ಯ ಬೋವಿ ಸಂಘಟನೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬೇಕು. ಅಲ್ಲದೆ ಇದರಲ್ಲಿ ಇತರ ಅಧಿಕಾರಿಗಳು ಶಾಮೀಲಾಗಿದ್ದು, ಈ ಬಗ್ಗೆ ಈಗಾಗಲೇ ಲೋಕಾಯುಕ್ತ, ಜಿಲ್ಲಾಧಿಕಾರಿ, ತಹಶೀಲ್ದಾರಿಗೂ ದೂರು ನೀಡಲಾಗಿದೆ. ಇದರ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಂತಹ ಪ್ರಕರಣಗಳಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಹನುಮಂತರಾಯ, ಮಂಗಳೂರು ತಾಲೂಕು ವಿಭಾಗಾಧಿಕಾರಿ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದಾರೆ ಎಂದರು.
ದಲಿತ ಯುವಮುಖಂಡ ರಘುವೀರ್ ಸೂಟರ್‌ಪೇಟೆ ಮಾತನಾಡಿ, ದಲಿತ ಮಹಿಳೆಯರು ಪೊಲೀಸ್ ಸ್ಟೇಷನ್ ಮೇಲಿನ ಭಯ ಮತ್ತು ಕಾನೂನು ಮಾಹಿತಿ ಕೊರತೆಯಿಂದ ಪ್ರಕರಣಗಳ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ದಲಿತ ಕಾಲನಿಗಳಲ್ಲಿ ಮಹಿಳೆಯರಿಗೆ ವಿಶೇಷ ಕಾನೂನು ಮಾಹಿತಿ ಕಾರ್ಯಾಗಾರ ನಡೆಸಬೇಕೆಂದು ಆಗ್ರಹಿಸಿದರು. ಇದಕ್ಕೆ ಡಿಸಿಪಿ ಹನುಮಂತರಾಯ ಉತ್ತರಿಸಿ, ದಲಿತ ಮುಖಂಡರು ಕಾರ್ಯಾಗಾರ ನಡೆಸಲು ಆಸಕ್ತಿಯಿರುವ ದಲಿತ ಕಾಲನಿಗಳ ಹೆಸರು ಸಂಗ್ರಹಿಸಿ ನೀಡಿದರೆ, ಅದೇ ಸ್ಥಳದಲ್ಲಿ ಪೊಲೀಸ್ ಸಂಪರ್ಕ ಸಭೆ ನಡೆಸಿ ಮಾಹಿತಿ ನೀಡಲಾಗುವುದು ಎಂದರು.
ನಗರದ ಶಾಲಾ ಕಾಲೇಜು ಕ್ಯಾಂಪಸ್ ಸಮೀಪ ಸಿಗರೇಟ್, ಮಾದಕ ವಸ್ತುಗಳ ಹೆಚ್ಚಾಗುತ್ತಿದ್ದು ಇದಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ರಘುವೀರ್ ಆಗ್ರಹಿಸಿದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿಸಿಪಿ ಹೇಳಿದರು.
ದಲಿತ ಮುಖಂಡ ಅಶೋಕ್ ಕೊಂಚಾಡಿ ಮಾತನಾಡಿ, ಖಾದಿ ಗ್ರಾಮೋದ್ಯೋಗ ಸಾಲ ಸೌಲಭ್ಯ ನೀಡಲು ಇಲಾಖೆಯಿಂದ ಅಧಿಕೃತ ಪತ್ರ ನೀಡಿದರೂ ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ. ಈ ಬ್ಯಾಂಕ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಡಿಸಿಪಿ ಹೇಳಿದರು.
ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಉದಯ ನಾಯ್ಕೆ, ವೆಲೆಂಟೈನ್ ಡಿಸೋಜ, ರಾಮರಾವ್ ಹಾಗೂ ದಲಿಯ ಮುಖಂಡರು ಉಪಸ್ಥಿತರಿದ್ದರು.







