ಉಗ್ರರ ವಿರುದ್ಧ ನಿರ್ಣಾಯಕ ಕ್ರಮ: ಟ್ರಂಪ್ ಕರೆ
ಕಾಬುಲ್ ಆ್ಯಂಬುಲೆನ್ಸ್ ಬಾಂಬ್ ದಾಳಿಗೆ ಖಂಡನೆ

ವಾಶಿಂಗ್ಟನ್,ಜ.28: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ 100ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಆ್ಯಂಬುಲೆನ್ಸ್ ಬಾಂಬ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ಖಂಡಿಸಿದ್ದಾರೆ. ತಾಲಿಬಾನ್ ಹಾಗೂ ಅದರ ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವವರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಜಗತ್ತಿನ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಕಾಬೂಲ್‌ನಲ್ಲಿ ಶನಿವಾರ ಜನದಟ್ಟಣೆಯ ಪ್ರದೇಶದಲ್ಲಿ ಸ್ಫೋಟಕಗಳಿಂದ ತುಂಬಿದ ಆ್ಯಂಬುಲೆನ್ಸ್ ವಾಹನವೊಂದು ಸ್ಫೋಟಿಸಿದಾಗ 100ಕ್ಕೂ ಅಧಿಕ ಮಂದಿ ಮೃತಪಟ್ಟು, ಇತರ 158 ಮಂದಿ ಗಾಯಗೊಂಡಿದ್ದರು.
ಕಾಬುಲ್‌ನಲ್ಲಿ ಹಲವಾರು ಅಮಾಯಕ ನಾಗರಿಕರು ಬಲಿಯಾದ ಹಾಗೂ ನೂರಾರು ಮಂದಿಯನ್ನು ಗಾಯಗೊಳಿಸಿದ ಶನಿವಾರದ ಹೇಯ ಬಾಂಬ್ ದಾಳಿಯನ್ನು ನಾನು ಖಂಡಿಸುತ್ತೇವೆ. ಈ ಕೊಲೆಗಡುಕತನದ ದಾಳಿಯು ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಹಾಗೂ ನಮ್ಮ ಅಫ್ಘಾನ್ ಪಾಲುದಾರರ ದೃಢನಿರ್ಧಾರಕ್ಕೆ ಪುನಶ್ಚೇತನ ನೀಡಲಿದೆಯೆದು ಅವರು ಹೇಳಿದರು.
ಅಫ್ಘಾನಿಸ್ತಾನವನ್ನು ಉಗ್ರರಿಂದ ಮುಕ್ತಗೊಳಿಸುವ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದ ಟ್ರಂಪ್ ಅವರು ತಾಲಿಬಾನ್‌ನ ಕ್ರೌರ್ಯವು ಗೆಲ್ಲಲಾರದು ಎಂದು ಘೋಷಿಸಿದ್ದಾರೆ.







