ಜಗದೀಶ್ ಶೇಣವ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲು ಎಸ್‌ಡಿಪಿಐ ಆಗ್ರಹ
ಮಂಗಳೂರು, ಜ. 28: ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಯಾದ ಬಶೀರ್‌ರವರ ಹತ್ಯೆಗೆ ‘‘ಪ್ರತೀಕಾರದ ಕೊಲೆ, ಇದರಲ್ಲಿ ನಮಗೇನು ಚಿಂತೆಯಿಲ್ಲ, ಕೊಲೆ ಮಾಡಿದವರನ್ನು ನಾವು ಬೆಂಬಲಿಸಬೇಕು. ಈ ಬಗ್ಗೆ ನನ್ನ ಮೇಲೆ ದೂರು ದಾಖಲಾದರು ಅದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುವುದಿಲ್ಲ’’ ಎಂದು ಹೇಳಿಕೆ ಕೊಟ್ಟಿದ್ದು, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಕೊಲೆಗಡುಕರ ಪರವಾದ ಈ ಹೇಳಿಕೆಯಿಂದ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತುಪಡಿಸಿದ್ದಾರೆ. ಇದು ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿಯ ಕೈವಾಡದ ಬಗ್ಗೆ ಆರೋಪಗಳ ತನಿಖೆ ನಡೆಸುತ್ತಿರುವಾಗ ತನಿಖೆಯ ದಿಕ್ಕನ್ನು ಬದಲಾಯಿಸಲು ಪ್ರಯತ್ನದ ಭಾಗವಾಗಿದೆ. ಬಶೀರ್ ಹತ್ಯೆಯ ಹಿಂದೆ ಜಗದೀಶ್ ಶೇಣವರ ಕೈವಾಡ ಎದ್ದು ಕಾಣುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಎಸ್‌ಡಿಪಿಐ ಒತ್ತಾಯಿಸಿದೆ.
ಇಂತಹ ಹೇಳಿಕೆ ಜಿಲ್ಲೆಯ ಶಾಂತಿಯನ್ನು ಕೆಡವಿ ಗಲಭೆಯನ್ನು ಸೃಷ್ಟಿಸುವ ಹುನ್ನಾರವಾಗಿದೆ. ಆದುದರಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್‌ಡಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







