ಕೇಂದ್ರ ಸರಕಾರದ ಹುದ್ದೆಯಲ್ಲಿ ಆ್ಯಸಿಡ್ ಸಂತ್ರಸ್ತರು, ಆಟಿಸಂ ವ್ಯಕ್ತಿಗಳಿಗೆ ಮೀಸಲಾತಿ

ಹೊಸದಿಲ್ಲಿ, ಜ. 27: ಆಟಿಸಂ, ಮಾನಸಿಕ ಅನಾರೋಗ್ಯ, ಬೌದ್ಧಿಕ ಅಸಮರ್ಥತೆ ಹಾಗೂ ಆ್ಯಸಿಡ್ ದಾಳಿಯ ಸಂತ್ರಸ್ತರು ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲಿದ್ದಾರೆ.
ನೇರ ನೇಮಕಾತಿ ಸಂದರ್ಭ ಒಟ್ಟು ಹುದ್ದೆಯಲ್ಲಿ ಅತಿ ಹೆಚ್ಚು ವೈಕಲ್ಯತೆ ಹೊಂದಿದ ಎ, ಬಿ, ಸಿ ಗೆ ಈಗಿರುವ ಶೇ. 3ರಿಂದ ಶೇ. 4ಕ್ಕೆ ಏರಿಕೆ ಮಾಡಲಾಗುತ್ತಿದೆ. ಅತ್ಯಧಿಕ ವೈಕಲ್ಯತೆ ಎಂದರೆ ಶೇ. 40ಕ್ಕಿಂತ ಕಡಿಮೆಯಾಗದ ನಿರ್ದಿಷ್ಟಪಡಿಸಲಾದ ವೈಕಲ್ಯತೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಂಧರು, ಕಡಿಮೆ ದೃಷ್ಟಿ ಹೊಂದಿರುವವರು, ಕಿವುಡರು, ಕಡಿಮೆ ಶ್ರವಣಶಕ್ತಿ ಹೊಂದಿದವರು; ಸೆರೆಬ್ರಲ್ ಪಾಲ್ಸಿ, ಕುಷ್ಠರೋಗ ಗುಣಮುಖರು, ಕುಬ್ಜರು, ಆ್ಯಸಿಡ್ ದಾಳಿಗೊಳಗಾದವರು, ಸ್ನಾಯು ಕ್ಷಯ ಸೇರಿದಂತೆ ಚಲನ ಸಂಬಂಧಿ ವೈಕಲ್ಯ ಹೊಂದಿರುವವರಿಗೆ ಪ್ರತಿ ಹುದ್ದೆಯಲ್ಲಿ ಶೇ. 1 ಮೀಸಲಿರಿಸುವಂತೆ ವೈಯಕ್ತಿಕ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಇತ್ತೀಚೆಗೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿತ್ತು.
ಆಟಿಸಂ, ಬೌದ್ಧಿಕ ಅಸಮರ್ಥತೆ, ನಿರ್ದಿಷ್ಟ ಕಲಿಕೆಯ ಅಸಮರ್ಥತೆ, ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಶೇ. 1 ಮೀಸಲಾತಿ ನೀಡುವಂತೆ ಈ ಪತ್ರ ತಿಳಿಸಿದೆ.
ಈ ನಡೆ ಕಲಿಕೆ ಅಸಮರ್ಥರು, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಮೀಸಲಾತಿ ಹೆಚ್ಚಿಸಲಿದೆ. ವೈಯಕ್ತಿಕ ಹಾಗೂ ತರಬೇತಿ ಇಲಾಖೆ 2005ರ ಆದೇಶದ ಪ್ರಕಾರ ಒಟ್ಟು ಹುದ್ದೆಯಲ್ಲಿ ಶೇ. 3 ಅಸಮರ್ಥತೆ ಹೊಂದಿದ ವ್ಯಕ್ತಿಗಳಿಗೆ ಮೀಸಲಿರಿಸಲಾಗಿತ್ತು.
ಹೊಸ ನಿಯಮದ ಪ್ರಕಾರ ಸರಕಾರದ ಎಲ್ಲ ಸಂಸ್ಥೆಗಳು ದೂರು ಪರಿಶೀಲಿಸಲು ಸಮಸ್ಯೆ ಪರಿಹಾರ ಅಧಿಕಾರಿಗಳನ್ನು ನಿಯೋಜಿಸಲು ಡಿಒಪಿಟಿ ನಿರ್ದೇಶಿಸಿದೆ.