ಸಿದ್ದರಾಮಯ್ಯನವರದ್ದು ನುಡಿದಂತೆ ನಡೆದ ಸರ್ಕಾರ: ವಿಷ್ಣುನಾಥನ್

ಹನೂರು,ಜ.28 : ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರ ಪಡೆದ ನರೇಂದ್ರ ಮೋದಿಯವರು ಜನರ ಮುಂದೆ ಸೋತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿ ದೇಶದಲ್ಲಿ ಒಂದು ಮಾದರಿ ಸರ್ಕಾರವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ತಿಳಿಸಿದರು.
ಹನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಹನೂರು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯೋಜಕರು ಹಾಗೂ ಬೂತ್ ಮಟ್ಟದ ಅದ್ಯಕ್ಷರು ಬಿಎಲ್‍ಎ2ರವರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಕೆಲವೇ ಕೆಲವು ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೂ ಹಾಕುತ್ತೇನೆ ಎಂದಿದ್ದರು. ತೈಲ ಬೆಲೆಯನ್ನು ಪ್ರತಿ ಲೀಟರ್‍ಗೆ 40 ರೂ. ನಂತೆ ನಿಗದಿ ಮಾಡಲಾಗುವುದು ಮತ್ತು ಯುವಕರಿಗೆ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡಿ ಉದ್ಯೋಗವನ್ನು ಒದಗಿಸಲಾಗುವುದು ಎಂದು ಸುಳ್ಳು ಭರವಸೆಗಳನ್ನ ನೀಡಿ ದೇಶದ ಜನರಿಗೆ ಮೋಸ ಮಾಡಿ ಜನರ ಮುಂದೆ ಸೋತಿದ್ದಾರೆ ಎಂದರು.
ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದು ದೇಶದಲ್ಲಿ ನಂ.1 ಸರ್ಕಾರವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಂತಹ ಆದಿತ್ಯನಾಥ್‍ರವರು ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯನವರಿಗೆ ಪಾಠವನ್ನು ಹೇಳಲು ಬರುತ್ತಾರೆ. ಅವರಿಗೆ ನಾಚಿಕೆ ಆಗಬೇಕು. ತಮ್ಮ ರಾಜ್ಯದ ಗೋರಕ್‍ಪುರದಲ್ಲಿ ಆಕ್ಸಿಜನ್ ಕೊರತೆಯಿಂದ ನೂರಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಒಂದು ಕಂಪನಿಗೆ ಆಕ್ಸಿಜನ್ ತುಂಬಿಸಿಲು ಟೆಂಡರ್ ನೀಡಿ, ಆ ಕಂಪೆನಿಗೆ ದುಡ್ಡನ್ನು ಪಾವತಿಸಿದ ಸರ್ಕಾರ ಅವರದು ಎಂದು ಹೇಳಿದರು.
ನಂತರ ಮಾತನಾಡಿದ ಶಾಸಕ ನರೇಂದ್ರ ರಾಜೂಗೌಡ, ನನ್ನ ಕನಸಿನ ಕೂಸಾದ ಕ್ಷೇತ್ರದ 291 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು 430 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ, ಕಳೆದ ತಿಂಗಳು ಮುಖ್ಯಮಂತ್ರಿಗಳು ಹನೂರು ಕ್ಷೇತ್ರಕ್ಕೆ ಆಗಮನ ದಿವಸದ ಹಿಂದಿನ ದಿನದಿಂದಲೇ ಆದೇಶ ನೀಡಲಾಗಿದೆ. ಅಲ್ಲದೇ ಕ್ಷೇತ್ರದ ರಾಮನಗುಡ್ಡೆ, ಹುಬ್ಬೆಹುಣಸೇ ಹಾಗೂ ಗುಂಡಾಲ್ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಆದಷ್ಟು ಬೇಗ ಅನುಷ್ಟಾನಗೊಳಿಸಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸದ ಆರ್ ದೃವನಾರಯಣ್ ತಾಲ್ಲೂಕು ಪಂಚಾಯತ್ ಅದ್ಯಕ್ಷ ರಾಜು ಚಾಮರಾಜನಗರ ಚುನಾವಣಾ ಉಸ್ತುವಾರಿ ಪುಷ್ಪಅಮರ್‍ನಾಥ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜು, ಮಲೈಮಹದೇಶ್ವರ ಬೆಟ್ಟದ ನಾಮ ನಿದೇಶಕರಾದ ಕೂಪ್ಪಳಿನಾಯಕ್ ಇನ್ನಿತರರು ಹಾಜರಿದ್ದರು







