ದ.ಕ.ಜಿಲ್ಲಾ ಕಸಾಪದಿಂದ ಬಹುಭಾಷಾ ಕವಿಗೋಷ್ಠಿ

ಮಂಗಳೂರು, ಜ.29: ವಿವಿಧ ಧರ್ಮಗಳ ವೈಶಿಷ್ಟತೆಯೊಂದಿಗೆ ಭಾರತೀಯತೆಯನ್ನು ಮೈಗೂಡಿಸಿಕೊಂಡು ಎಲ್ಲರೂ ಬದುಕಬೇಕು. ಅದಕ್ಕಾಗಿದೇಶದ ಸಂವಿಧಾನದ ಆಶೋತ್ತರಗಳನ್ನು ಅನುಷ್ಠಾನಗೊಳಿಸಿ ರಾಷ್ಟ್ರದ ಏಕತೆಯ ಸಂಕಲ್ಪ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ನಗರದ ಪುರಭವನದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರಗಿದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಶಬೀನಾ ಬಾನು ವೈ.ಕೆ. ಮಂಗಳೂರು (ಕನ್ನಡ), ರಾಜ್ ಅಡೂರು ಕಾಸರಗೋಡು (ಶಿವಳ್ಳಿ ತುಳು), ಶ್ರೀವಾಣಿ ಆರ್. ರೈ ಮಂಗಳೂರು (ತುಳು), ಸಾವಿತ್ರಿ ರಮೇಶ್ ಭಟ್ ಸುರತ್ಕಲ್ (ಹಿಂದಿ), ಸಲೀಂ ಮಾಣಿ ಬಂಟ್ವಾಳ (ಬ್ಯಾರಿ), ಚಾರ್ಲ್ಸ್ ಡಿಸೊಜ ವಾಮಂಜೂರು (ಕೊಂಕಣಿ), ಎ.ಕೆ. ಫೈಝಲ್ ಪುತ್ತೂರು (ಮಲಯಾಳಂ), ಎಂ. ಮಹಮ್ಮದ್ ಮಾರಿಪಳ್ಳ ಫರಂಗೀಪೇಟೆ (ಕನ್ನಡ), ಕರುಣಾಕರ ಬಳ್ಕೂರು ಮಂಗಳೂರು (ಕನ್ನಡ), ವೇದಾ ಶೆಟ್ಟಿ ಕುಂದಾಪುರ (ಕುಂದಾಪುರ ಕನ್ನಡ) ಸ್ವರಚಿತ ಕವನಗಳನ್ನು ವಾಚಿಸಿದರು.
ಈ ಸಂದರ್ಭ ನಿವೃತ್ತ ಸೇನಾ ಯೋಧ ಕುಸುಮಾಧರ್ ಬಿ.ಕೆ. ಗಣರಾಜ್ಯೋತ್ಸವ ಸಂದೇಶ ನೀಡಿದರು. ವೇದಿಕೆಯಲ್ಲಿ ಡಿಡಿಪಿಐ ವೈ. ಶಿವರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಪಿ. ಜ್ಞಾನೇಶ್ ಮತ್ತು ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ. ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ಜಯಲಕ್ಷ್ಮೀ ಬಿ.ಶೆಟ್ಟಿ, ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಉಪಸ್ಥಿತರಿದ್ದರು.





