ರಾಜಸ್ತಾನ, ಹರ್ಯಾಣ, ಉತ್ತರ ಪ್ರದೇಶಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
‘ಗೋರಕ್ಷಕರ’ ಕೃತ್ಯ ತಡೆಯಲು ವಿಫಲ

ಹೊಸದಿಲ್ಲಿ, ಜ.29: ಸೂಚನೆ ನೀಡಿದ ಬಳಿಕವೂ ‘ಗೋರಕ್ಷಕ’ರ ಕೃತ್ಯಗಳನ್ನು ತಡೆಯಲು ವಿಫಲವಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜಸ್ತಾನ, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ್ದು, ಸೆ.3ರ ಒಳಗೆ ಉತ್ತರಿಸುವಂತೆ ತಿಳಿಸಿದೆ.
‘ಗೋರಕ್ಷಕರ ಕೃತ್ಯ’ವನ್ನು ವಿರೋಧಿಸಿ ಕಳೆದ ವರ್ಷದಿಂದಲೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ತುಷಾರ್ ಗಾಂಧಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕಳೆದ ವರ್ಷ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್, ‘ಗೋರಕ್ಷಣೆ’ಯ ಕೃತ್ಯದಿಂದ ಉಂಟಾಗುವ ಹಿಂಸಾಚಾರವನ್ನು ತಡೆಗಟ್ಟುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಿಕೊಂಡು ಬರುವಂತೆ 2017ರ ಸೆ.6ರಂದು 26 ರಾಜ್ಯಗಳಿಗೆ ಸೂಚನೆ ನೀಡಿತ್ತು. ನೋಡಲ್ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವಂತೆ ಹಾಗೂ ಹೆದ್ದಾರಿ ಗಸ್ತು ಕಾರ್ಯದ ವ್ಯವಸ್ಥೆ ಮಾಡುವಂತೆ ಮತ್ತು ಈ ಕುರಿತು ಮಾಹಿತಿ ನೀಡುತ್ತಿರುವಂತೆ ಸೂಚನೆಯಲ್ಲಿ ತಿಳಿಸಲಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ಸರಕಾರ ತಿಳಿಸಿದಾಗ, ಸಂವಿಧಾನದ ಪ್ರಕಾರ ಕೇಂದ್ರ ಸರಕಾರ ಗೋರಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸುವ ಜವಾಬ್ದಾರಿಯನ್ನು ಹೊಂದಿಲ್ಲವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಪಾಲನಾ ವರದಿ ಸಲ್ಲಿಸುವಂತೆ ಸೆ.26ರಂದು ಮತ್ತೆ ಸೂಚಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಯಾರೊಬ್ಬರೂ ಜವಾಬ್ದಾರಿ ನಿರ್ವಹಣೆ ಕಾರ್ಯದಿಂದ ನುಣುಚಿಕೊಳ್ಳುವಂತಿಲ್ಲ ಎಂದು ತಿಳಿಸಿತ್ತು.
‘ಗೋರಕ್ಷಕರ’ಕೃತ್ಯದ ಪ್ರಪ್ರಥಮ ಘಟನೆ 2015ರಲ್ಲಿ ಉತ್ತರಪ್ರದೇಶದಲ್ಲಿ ವರದಿಯಾಗಿದ್ದು ಗೋವನ್ನು ಕೊಂದಿರುವ ಆರೋಪದಲ್ಲಿ ಮುಹಮ್ಮದ್ ಅಖ್ಲಾಕ್ ಎಂಬ ವೃದ್ಧರನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು.
2017ರ ಜುಲೈ ತಿಂಗಳಲ್ಲಿ ‘ಗೋರಕ್ಷಕರು’ ನಾಲ್ವರು ದಲಿತರನ್ನು ಬಟ್ಟೆ ಬಿಚ್ಚಿಸಿ ಕಾರೊಂದಕ್ಕೆ ಕಟ್ಟಿ ಎಳೆದುಕೊಂಡು ಸಾಗಿದ ಘಟನೆ ಗುಜರಾತ್‌ನಲ್ಲಿ ನಡೆದಿತ್ತು. ಅಲ್ಲದೆ ರಾಜಸ್ತಾನದ ಅಲ್ವಾರ್‌ನಲ್ಲಿ ಹೈನುಗಾರಿಕೆ ನಡೆಸುತ್ತಿದ್ದ 55ರ ಹರೆಯದ ಪೆಹ್ಲೂಖಾನ್ ಎಂಬ ವ್ಯಕ್ತಿಯ ಮೇಲೆ ಕೊಲೆನಡೆದಿತ್ತು. ಈ ಪ್ರಕರಣ ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ಹಲವು ಪ್ರಕರಣಗಳು ನಡೆದ ಬಳಿಕ ಗೋರಕ್ಷಕರ ಕೃತ್ಯಗಳನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರದ ಸಚಿವರು ಖಂಡಿಸಿದ್ದರು. ಕೆಲವು ವ್ಯಕ್ತಿಗಳು ರಾತ್ರಿಯಿಡೀ ದುಷ್ಕೃತ್ಯಗಳನ್ನು ನಡೆಸುತ್ತಾ ಹಗಲಿನಲ್ಲಿ ‘ ಗೋರಕ್ಷಕರ’ ಮುಖವಾಡ ಧರಿಸಿ ತಿರುಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.