ಉಪ್ಪಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ: ಜ.30 ರಂದು ಉಪ್ಪಿನ ಸತ್ಯಾಗ್ರಹ
ಬೆಂಗಳೂರು, ಜ.29: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಉಪ್ಪಿನ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಲಕ್ಷ್ಮಣ ಉಪ್ಪಾರ, ರಾಜ್ಯದಲ್ಲಿ ಉಪ್ಪಾರ ಸಮುದಾಯ ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀವ್ರ ಹಿಂದುಳಿದಿದೆ. ಗಾರೆ ಕೆಲಸ, ಕಟ್ಟಡ ಕೆಲಸ, ಕೂಲಿ ಕೆಲಸ ಸೇರಿದಂತೆ ಇನ್ನಿತರೆ ಕಸುಬುಗಳನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಅತ್ಯಂತ ಹೀನಾಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಉಪ್ಪಾರ ಸಮುದಾಯವನ್ನು ಎಸ್ಟಿ ಸಮುದಾಯದ ಅಡಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಲಾಗಿದೆ. ಅಲ್ಲದೆ, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಮತ್ತು ಹಾವನೂರು ಆಯೋಗದ ವರದಿಗಳು ಉಪ್ಪಾರ ಸಮಾಜ ಹಿಂದುಳಿದಿದೆ ಎಂದು ಸ್ಪಷ್ಟಪಡಿಸಿವೆ. ಕಾರವಾರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಪ್ಪಾರರನ್ನು ಎಸ್ಟಿ ಪಟ್ಟಿಗೆ ಸೇರಿಸಲಾಗಿದೆ. ಬಿಹಾರದಲ್ಲಿ ನಮ್ಮನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಲಾಗಿದೆ ಎಂದು ಹೇಳಿದರು.
ಎಲ್ಲ ಸಮುದಾಯಗಳನ್ನು ಸರಿಯಾದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿದರೆ ಮಾತ್ರ ಸಮಾನವಾಗಿ ಎಲ್ಲರೂ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಹೀಗಾಗಿ, ಕೂಡಲೇ ಉಪ್ಪಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ನಮ್ಮ ಸಮುದಾಯಕ್ಕಿರುವ ಆದಾಯ ಮಿತಿ ತೆಗೆದು ಹಾಕಬೇಕು ಅಥವಾ ಉಪ್ಪಾರ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಮರೇಶ್ ಕಟ್ಟಿಮನಿ, ಸತೀಶ ಮರಗೋಡ, ಬಲರಾಮ, ಸಿದ್ದರಾಜು, ಕಿರಣ ಉಪ್ಪಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







