ಬ್ರಿಟಿಷರಿಂದ ಭಾರತೀಯ ಕಲೆಗಳಿಗೆ ಸಾಂಸ್ಕೃತಿಕ ರೂಪ: ಡಾ.ನಿರಂಜನ್

ಉಡುಪಿ, ಜ.29: ಭಾರತೀಯ ಕಲೆಗಳಿಗೆ ಸಾಂಸ್ಕೃತಿಕ ರೂಪ ನೀಡಿದವರು ಬ್ರಿಟಿಷರು. ಅವರು ದೇಶದ ನಾನಾ ಕಡೆಗಳಲ್ಲಿ ಸ್ಥಾಪಿಸಿದ ಚಿತ್ರಕಲಾ ಶಾಲೆಗಳಿಂದ ಕಲಿತು ಹೊರ ಬಂದ ಹಲವು ಕಲಾವಿದರು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಚಿತ್ರಕಲೆಗಳನ್ನು ಸ್ಥಾಪಿಸಿದರು ಎಂದು ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ್ ಹೇಳಿದ್ದಾರೆ.
ಗದಗ ವಿಜಯ ಕಾಲೇಜು ಆಫ್ ಫೈನ್‌ಆರ್ಟ್‌ನ ಪಿ.ಜಿ.ಆರ್ ಸೆಂಟರ್‌ನ ಕಲಾವಿದರುಗಳ ಎರಡು ದಿನಗಳ ಚಿತ್ರಕಲಾ ಪ್ರದರ್ಶನವನ್ನು ಸೋಮವಾರ ಉಡುಪಿ ಚಿತ್ರಕಲಾ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಸದಸ್ಯ ರಾಘ ವೇಂದ್ರ ಕೆ.ಅಮೀನ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ, ಗದಗ ವಿಜಯ ಕಾಲೇಜು ಆಫ್ ಫೈನ್‌ಆರ್ಟ್‌ನ ಪ್ರೊ.ಬಸವರಾಜ್ ಸಿ.ಕುಟ್ನಿ, ಉಡುಪಿ ಚಿತ್ರಕಲಾ ಮಂದಿರದ ಪ್ರಾಂಶುಪಾಲರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು.
ಕಲಾವಿದರುಗಳಾದ ಸಂತೋಷ್ ಎಂ.ಜೋಗಿ, ವಿಶಾಲ್ ಹಂಜಗಿ, ರಮೇಶ್ ಅಂಗಡಿ, ಬಸವರಾಜ್ ಹುಬ್ಬಳ್ಳಿ, ಗಣೇಶ್ ಸಬೋಜಿ, ಶರಣು ತಲವಾರ್, ಕರೀಷ್ಮಾ ಭಂದೇಬುರುಜ್, ವಿಶಾಲ್ ಗೆನ್ನೂರುಮಠ, ರುಕ್ಮಿಣಿ ಗುಡ್ಡದ್ಮಣಿ, ಸಂಧ್ಯಾರಾಣಿ ಅವರ ಒಟ್ಟು 32 ಕಲಾಕೃತಿಗಳನ್ನು ಪ್ರದರ್ಶಿಸ ಲಾಗಿತ್ತು. ಸಂತೋಷ್ ಎಂ.ಜೋಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







