ಬೆಳದಿಂಗಳ ಸಮ್ಮೇಳನಾಧ್ಯಕ್ಷರಾಗಿ ಬಾಬು ಅಮೀನ್ ಆಯ್ಕೆ

ಹೆಬ್ರಿ, ಜ.29: ಮೂಡಬಿದ್ರೆಯ ಆಲಂಗಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಜ.31ರಂದು ಹಮ್ಮಿಕೊಳ್ಳಲಾಗಿರುವ 9ನೇ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಆಯ್ಕೆಯಾಗಿದ್ದಾರೆ.
ಧರ್ಮಸ್ಥಳ ಶ್ರೀರಾಮಕ್ಷೇತ್ರದ ಉಡುಪಿ ವಿದ್ಯಾ ಸಂಸ್ಥೆಗಳ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಇದರ ಅಧ್ಯಕ್ಷರಾಗಿ, ಉಡುಪಿ ಶ್ರೀಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನದ ಸ್ಥಾಪಕ ವಿಶ್ವಸ್ಥ, ಮುಂಬಯಿ ವಾಸಿನಾಕಾದ ಶನಿಪೂಜಾ ಸಮಿತಿಯ ಸ್ಥಾಪಕ ಮತ್ತು ಅಧ್ಯಕ್ಷ, ಕೆಮ್ಮಲಜೆ ಜಾನಪದ ಪ್ರಕಾಶನ ನಿಟ್ಟೂರು ಇದರ ಸ್ಥಾಪಕ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೀಗೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ಸಮ್ಮೇಳನವನ್ನು ಸಂಜೆ 5:30ಕ್ಕೆ ಸಿನಿಮಾ ನಿರ್ಮಾಪಕ ಕಡಂದಲೆ ಸುರೇಶ ಭಂಡಾರಿ ಉದ್ಘಾಟಿಸುವರು. ಯಕ್ಷಗಾನದ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲಾ ಸಭಾಧ್ಯಕ್ಷತೆ ವಹಿಸಲಿರುವರು. ತುಳು ಭಾಷೆ-ಸಂಸ್ಕೃತಿ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ, ಬಾಲ ಸಾಧಕರಿಗೆ, ಯುವ ಸಾಧಕರಿಗೆ, ಹಿರಿಯ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





